ಚುನಾವಣೆ
ಒಂದು ಅಧಿಕಾರ ಸ್ಥಾನಕ್ಕೆ ಅಥವಾ ಒಂದು ಸಂಸ್ಥೆಯ ಸದಸ್ಯತ್ವಕ್ಕೆ ಮತದಾರರು ಒಬ್ಬ ವ್ಯಕ್ತಿಯನ್ನು ಗುಪ್ತಮತದಾನದಿಂದಲೋ ಕೈ ಎತ್ತುವುದರಿಂದಲೋ ಧ್ವನಿಯಿಂದಲೋ ಆರಿಸುವ ಕ್ರಿಯೆ (ಇಲೆಕ್ಷನ್). ಒಂದು ಸಂಘಟನೆಯಲ್ಲಿರುವ ಎಲ್ಲರು ಅಥವಾ ಅವರಲ್ಲಿ ಹಲವರು ತಮ್ಮೊಳಗಿನ ಕೆಲವು ಜನರನ್ನು ಅಥವಾ ಒಬ್ಬನನ್ನು ಆ ಸಂಘಟನೆಯ ಪದಾಧಿಕಾರ ವಹಿಸಲು ಆಯ್ಕೆ ಮಾಡುವಂತೆ ತಾವೇ ರಚಿಸಿಕೊಂಡ ನಿಯಮಗಳಿಂದ ಮನ್ನಣೆ ಪಡೆದ ವಿಧಾನವೇ ಚುನಾವಣಾ ವಿಧಾನ.
ಇತಿಹಾಸ

ಪಾಶ್ಚಾತ್ಯ ದೇಶಗಳಲ್ಲಿ: ಚುನಾವಣೆಯ ಇತಿಹಾಸ ಪಾಶ್ಚಾತ್ಯ ದೇಶಗಳಲ್ಲಿ ಕ್ರಿ.ಪೂ. 6-5ನೆಯ ಶತಮಾನಗಳಿಂದಲೇ ಆರಂಭವಾಯಿತೆಂದು ಹೇಳಬಹುದು. ಪ್ರಾಚೀನ ಐರೋಪ್ಯ ಸಮಾಜಗಳಲ್ಲಿ ಚುನಾವಣೆ ಒಂದು ಸಾಮಾಜಿಕ ಅಗತ್ಯವಾಗಿ ರೂಪುಗೊಂಡಂತೆ ತೋರುತ್ತದೆ. ಗ್ರೀಕರ ನಗರ ರಾಜ್ಯಗಳಲ್ಲಿ ಚುನಾವಣೆಗೆ ರಾಜಕೀಯ ಮಹತ್ತ್ವವಿತ್ತು. ಈ ಪದ್ಧತಿಯ ಕುರುಹುಗಳನ್ನು ಇತರ ಕಡೆಗಳಲ್ಲೂ ಕಾಣಬಹುದಾದರೂ ಅವುಗಳ ವ್ಯವಸ್ಥಿತ ಅಧ್ಯಯನ ಇನ್ನೂ ಆಗಬೇಕಾಗಿದೆ. ಹೋಮರನ ಕವಿತೆಯಲ್ಲಿ ವರ್ಣಿತರರಾದ ರಾಜರು ನಿರಂಕುಶಾಧಿಪತಿಗಳಾಗಿರಲಿಲ್ಲ. ಈಗ ಆಫ್ರಿಕನ್ ಸಮಾಜಗಳಲ್ಲಿ ಕಾಣುವಂತೆ ಅವರು ರಾಜಮನೆತನದವರಾದರೂ ಒಂದು ವಿಧದಲ್ಲಿ ತಂಡದ ಧುರೀಣರಾಗಿ (ಪೈಪೋಟಿಯಿಂದಾದರೂ ಸರಿ) ರೂಪುಗೊಂಡವರಾಗಿರುತ್ತಿದ್ದರು. ಆಗಮೆಮ್ನಾನ್ ಇತರ ರಾಜರುಗಳಲ್ಲಿ ಹೀಗೆ ಮುಖಂಡತ್ವ ಸಂಪಾದಿಸಿದ್ದ. ಯೂರೋಪಿನ ಇತರ ದೇಶಗಳಲ್ಲೂ ಇಂಥ ನಿದರ್ಶನಗಳು ಸಿಕ್ಕುತ್ತವೆ. ಮಾನವ ನಾಗರಿಕತೆಯ ಇತಿಹಾಸದಲ್ಲಿ ಅಲೆಮಾರಿ ಯುಗದ ಅನಂತರ ಕೃಷಿಯುಗ ಪ್ರಾರಂಭವಾಗಿ, ಸ್ಥಿರ ವಸತಿ, ವ್ಯಾಪಾರ, ವಲಸೆ ಇವು ಬೆಳೆದಾಗ, ಶ್ರೀಮಂತ ಹಾಗೂ ಬಡವರ ನಡುವಣ ಘರ್ಷಣೆ ಪ್ರಾರಂಭವಾಗಿರಬೇಕು. ಆಗ ರಾಜಕೀಯ ಸಂಸ್ಥೆಗಳನ್ನು ಕುರಿತ ಗ್ರೀಕರ ವಿಚಾರ ಹಾಗೂ ರೂಢಿಗಳ ಮೇಲೆ ವಿಶಿಷ್ಟ ಪರಿಣಾಮವಾದ್ದು ಕಂಡುಬರುತ್ತದೆ. ಈ ಘರ್ಷಣೆ ಹೆಚ್ಚಾದಾಗ ಗ್ರೀಕ್ ಚುನಾವಣೆಗೆ ಹೊಸ ರೂಪ ಬಂತು. ಜನಾಭಿಪ್ರಾಯ, ಸಂಧಾನ-ಎರಡೂ ಮಾರ್ಗಗಳ ಬಳಕೆಯಾದ್ದು ಕಂಡುಬರುತ್ತದೆ.

	ನಾಗರಿಕರ ಸಭೆ ಆಗ ರೂಪುಗೊಂಡ ಒಂದು ಸಂಸ್ಥೆ. ಅಲ್ಲಿ ವಿಷಯಗಳು ಮತದಾನದ ಮೂಲಕ ತೀರ್ಮಾನವಾಗುತ್ತಿದ್ದುವು. ಕೈಯೆತ್ತಿ ಮತವನ್ನು ಸೂಚಿಸಲಾಗುತ್ತಿತ್ತು ಅಥವಾ ಬೆಣಚುಕಲ್ಲುಗಳೇ ಮತಗಳಂತೆ (ಬ್ಯಾಲೆಟ್) ಬಳಕೆಯಾಗುತ್ತಿದ್ದವು. ಈ ಸಭೆಗೊಬ್ಬ ಅನೌಪಚಾರಿಕ ಅಧಿಕಾರಿ (ಮುಂದಾಳು) ಇರುತ್ತಿದ್ದ. ಪೆರಿಕ್ಲೀಸ್ (ಮ. ಕ್ರಿ.ಪೂ. 429) ಕ್ಲೀಯನ್ (ಮ.ಕ್ರಿ. ಪೂ. 422) ಡಿಮಾಸ್ತೇನೀಸ್ (ಕ್ರಿ.ಪೂ. 385-322)-ಇವರು ಇಂಥ ಅಧಿಕಾರಿಗಳು. ಈ ವ್ಯವಸ್ಥೆಯಲ್ಲಿ ಜನರ ನಡುವೆ ನಾಗರಿಕರು ಹಾಗೂ ಸಾಮಾನ್ಯರು ಎಂಬ ಭೇದವಿರುತ್ತಿತ್ತೆಂಬುದು ಇಲ್ಲಿ ಗಮನಿಸಬೇಕಾದ ವಿಚಾರ. ಅಧಿಕಾರಿಗಳ (ಸೇನಾಧಿಪತಿ ಮುಂತಾದವರು) ಆಯ್ಕೆ ಸ್ಥಾನಿಕವಲ್ಲದ, ಎಂದರೆ ವಿವಿಧ ತಂಡಗಳ (ಟ್ರೈಬ್ಸ್). ಮತಕ್ಷೇತ್ರದಿಂದ ಆಗುತ್ತಿತ್ತು.

	ಅಥೀನಿಯನ್ (ಅಥೆನ್ಸಿನ) ಪ್ರಜಾಸತ್ತಾತ್ಮಕ ಸಿದ್ಧಾಂತದಲ್ಲಿ ಚುನಾವಣಾ ತತ್ತ್ವವನ್ನು ಅರೆಮನಸ್ಸಿನಿಂದ ಒಪ್ಪಿದಂತಿತ್ತು. ಏಕೆಂದರೆ ನಾಗರಿಕರಲ್ಲಿ ಸಮಾನತಾ ಭಾವಕ್ಕೆ ಅಡ್ಡಿಯಾಗಿ ಹಳೆಯ ಪ್ರಭಾವಿ ಮನೆತನಗಳ ಆಕರ್ಷಕ ಹಾಗೂ ಮಹತ್ವಾಕಾಂಕ್ಷಿ ಯುವಕರಿಗೆ ನಿರಂತರ ಅಧಿಕಾರ ಕೊಡುವ ಅಪಾಯ ಈ ವ್ಯವಸ್ಥೆಯಲ್ಲಿ ಇತ್ತೆಂದು ಭಾವಿಸಲಾಗಿತ್ತು. ಅಲ್ಲದೆ ಸಾರ್ವಜನಿಕರಲ್ಲಿ ಧಾಡಸಿ (ಮುನ್ನುಗ್ಗುವ) ಪ್ರವೃತ್ತಿಯವರು ಬಲಪ್ರಯೋಗದಿಂದ ಚುನಾವಣಾ ವಿಜಯವನ್ನು ಖಾಯಂ ಆಗಿ ಉಳಿಸಿಕೊಳ್ಳುವ ಗಂಡಾಂತರವಿತ್ತು-ಇವು ಗ್ರೀಕ್ ದೌರ್ಜನ್ಯದ ಉದಾಹರಣೆಗಳು.

	ನಾಗರಿಕರು ಪಾಳಿಯಿಂದ ಅಧಿಕಾರ ವಹಿಸಬೇಕೆಂಬುದು ಆಗಿನ ಮತ್ತೊಂದು ಭಾವುಕ ಸಿದ್ಧಾಂತ. ಈ ಪಾಳಿಯನ್ನು ಚೀಟಿ ಎತ್ತಿ (ಬೈಲಾಟ್) ನಿರ್ಧರಿಸಬೇಕಾಗುತ್ತಿತ್ತು. 500 ಜನರ ಸಭೆ ಚೀಟಿ ಎತ್ತುವ ವಿಧಾನದಿಂದ ಅಧಿಕಾರಿಗಳನ್ನೂ ನ್ಯಾಯದರ್ಶಿಗಳನ್ನೂ (ಜೂರಿ) ಆರಿಸುತ್ತಿತ್ತಲ್ಲದೆ ಸಾರ್ವಜನಿಕ ಕೆಲಸದ ಮೇಲ್ವಿಚಾರಣೆಯನ್ನೂ ನೋಡಿಕೊಳ್ಳುತ್ತಿತ್ತು.

	ಅರಿಸ್ಟಾಟಲ್ (ಕ್ರಿ.ಪೂ. 384-322) ಮತದಾನ ಪದ್ಧತಿಯನ್ನು ಬಹಳ ವಿಶದವಾಗಿ ವಿವರಿಸಿದ್ದಾನೆ. ಇಂಗ್ಲಿಷ್ ಮತ್ತು ಅಮೆರಿಕನ್ ಹಳೆಯ ಪದ್ಧತಿಗಳೂ ಹೀಗೆಯೇ ಇದ್ದುವು. ಚಿಕ್ಕವಾದ ಸ್ವಯಂಪ್ರೇರಿತ ಸಮಾಜಗಳಲ್ಲಿ ಪಾಳಿಯಿಂದ ಅಧಿಕಾರವಹಿಸುವ ರೂಢಿ ಈಗಲೂ ಇದೆ. ಅಥೀನಿಯನರು ಪ್ರತಿನಿಧಿಗಳ ಆಯ್ಕೆಗೆ ಚೀಟಿ ಎತ್ತುವ ಪದ್ದತಿಯನ್ನೂ ತಜ್ಞ ಅಧಿಕಾರಿಗಳ ಆಯ್ಕೆಗೆ ಮತದಾನ (ಬ್ಯಾಲಟಿಂಗ್) ಪದ್ಧತಿಯನ್ನೂ ಅನುಸರಿಸಿದರು. ಆಧುನಿಕ ಪದ್ಧತಿಯಲ್ಲಿ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಪ್ರತಿನಿಧಿಗಳ ಆಯ್ಕೆ ಮತದಾನದಿಂದ ನಡೆಯುತ್ತದೆ.

	ರೋಮನ್ ಗಣರಾಜ್ಯದಲ್ಲಿ ಸಹ ಒಬ್ಬನಿಗೆ ಒಂದು ಮತ ಎಂಬ ತತ್ತ್ವವನ್ನು ಒಪ್ಪಿರಲಿಲ್ಲ. ಮತಕ್ಷೇತ್ರ ಆಂತರಿಕ ಆಯ್ಕೆ ಒಬ್ಬನಿಗೆ ಒಂದು ಮತದ ಆಧಾರದ ಮೇಲೆ ಆಗುತ್ತಿತ್ತಾದರೂ, ಗಣರಾಜ್ಯದ ತೀರ್ಮಾನಗಳು ಹಾಗೂ ಆಯ್ಕೆಗಳು ಸಮ್ಮಿಶ್ರ ತಂಡಗಳ ಮೂಲಕ ಆಗುತ್ತಿದ್ದುವು. ಮಧ್ಯಯುಗದ ಚರ್ಚಿನವರು ಪ್ರಾಚೀನ ಚುನಾವಣಾ ಪದ್ಧತಿಯನ್ನು ಕಾಯ್ದುಕೊಂಡು ಬಂದರು. ಪೋಪ್, ಬಿಷಪ್ ಮುಂತಾದವರನ್ನು ಇವರಿಗಿಂತ ದರ್ಜೆಯಲ್ಲಿ ಕಿರಿಯರಾದವರನ್ನೊಳಗೊಂಡ ಮತಕ್ಷೇತ್ರದಿಂದ ಚುನಾವಣೆಯ ಮೂಲಕ ಆರಿಸಲಾಗುತ್ತಿತ್ತು. ಆದರೆ ಕೆಲವೇ ಜನರಿಗೆ ಚುನಾವಣಾಧಿಕಾರವಿದ್ದ ಈ ವ್ಯವಸ್ಥೆಯನ್ನು ಎಲ್ಲ ಶ್ರದ್ಧಾವಂತರೂ ಪ್ರತಿಭಟಿಸುತ್ತಿದ್ದರು.

	ಮಾಂಡಲಿಕರ ಸಮ್ಮತಿ, ಶಾಸನಗಳ ಮತ್ತು ರೂಢಿಗಳ ಪರಿಧಿ-ಇದಕ್ಕೆ ರಾಜಸತ್ತೆ ಸೀಮಿತವಾಗಿರುತ್ತಿತ್ತು. ಅನಂತರ ಮಾಂಡಲಿಕರು, ಪರಿಷತ್ತು ಮತ್ತು ಸಭೆಗಳ ಸಲಹೆ ಪಡೆಯುವ ಪದ್ಧತಿ ಬಂತು. ಇಲ್ಲಿ ಒಂದು ಬಗೆಯ ಪ್ರಾತಿನಿಧ್ಯ ಪ್ರಾರಂಭವಾಯಿತು. ಈ ಸಭೆಗಳೇ ಮುಂದೆ ಯೂರೋಪಿನಲ್ಲಿ ಸಂಸದೀಯ (ಪಾರ್ಲಿಮೆಂಟರಿ) ಸಂಪ್ರದಾಯಕ್ಕೆ ನಾಂದಿಯಾದುವು. ಪ್ರಾತಿನಿಧ್ಯ ಮೊದಲು ಸೀಮಿತವಾಗಿತ್ತು. ಆಸ್ತಿಗಳ ಆಧಾರದ ಮೆಲೆ ಪ್ರಾತಿನಿಧ್ಯ ನೀಡಲಾಗುತ್ತಿತ್ತು. (ಉದಾ: ಗ್ರೇಟ್ ಲಾಡ್ರ್ಸ್, ಗ್ರೇಟ್ ಕ್ಲರ್ಜಿ, ಕಡಿಮೆ ವರ್ಗದ ಲಾರ್ಡುಗಳು, ಕೃಷಿಕರು ಇತ್ಯಾದಿ). ಇನ್ನೊಂದು ಪ್ರಕಾರದಲ್ಲಿ ಸ್ಥಳೀಯ ಸಮಾಜಗಳಿಗೆ ಪ್ರಾತಿನಿಧ್ಯ ಕೊಡಲಾಯಿತು; ವ್ಯಕ್ತಿಗಳಿಗಲ್ಲ, ಕಾಮನ್ಸ್ ಸಭೆಗೆ (ಹೌಸ್ ಆಫ್ ಕಾಮನ್ಸ್) ಪ್ರತಿಯೊಂದು ಷೈರ್‍ನಿಂದ ಇಬ್ಬರು ಸರದಾರರನ್ನೂ ಪ್ರತಿ ಬರೋದಿಂದ ಇಬ್ಬರು ಬರ್ಗೇಸ್‍ಗಳನ್ನೂ ಪ್ರತಿನಿಧಿಗಳೆಂದು ತೆಗೆದುಕೊಳ್ಳಲಾಗುತ್ತಿತ್ತು. ಇವರನ್ನು ಆರಿಸಿ ಕಳಿಸುವ ಜವಾಬ್ದಾರಿ ಆಯಾ ಸಮಾಜದ್ದಾಗಿತ್ತು.

	ಕ್ರಿ.ಶ. 7-8ನೆಯ ಶತಮಾನಗಳಲ್ಲಿ ಆಸ್ತಿವಂತರ ಸಭೆಗಳು ಹೋಗಿ ನಿರಂಕುಶ ಆಧುನಿಕ ರಾಜಸತ್ತೆಗಳು ಬಂದವಾದರೂ ಇಂಗ್ಲೆಂಡಿನಲ್ಲಿ ಚುನಾವಣೆಯ ಒಂದಂಶವೂ ಸ್ಕಾಟ್ಲೆಂಡ್, ಸ್ವೀಡನ್‍ಗಳಲ್ಲಿ ಸಂಸತ್ತುಗಳೂ ಉಳಿದುವು. ಜನ ಸಮ್ಮತಿ, ಮತಾಧಿಕಾರ, ಪ್ರಾತಿನಿಧ್ಯ ಮುಂತಾದವನ್ನು ತತ್ಕಾಲಕ್ಕೆ ರೂಢಿಯಲ್ಲಿ ತರಲಾಗದಿದ್ದರೂ, ಮೂಲತತ್ತ್ವಗಳು ರೂಪುಗೊಂಡುವು. ಅವು ಆದರ್ಶಗಳೆಂದು ಒಪ್ಪಿಕೊಳ್ಳಲಾಯಿತು. 1640-1650ರ ಇಂಗ್ಲಿಷ್ ಮುಖಂಡರ ಹೇಳಿಕೆಗಳು ಅಥೀನಿಯನ್ ಪ್ರಜಾಸತ್ತೆಯ ಅಸಮ್ಮತ ಜನಸ್ತೋಮದ ಭಾಷೆಯನ್ನು ನೆನಪಿಗೆ ತರುತ್ತವೆ. ಆಳಿಸಿಕೊಳ್ಳುವವರ ಒಪ್ಪಿಗೆಯೇ ಎಲ್ಲ ಸರ್ಕಾರಗಳ ಅಧಿಕಾರದ ಮೂಲ. ಆ ಒಪ್ಪಿಗೆ ಸಾರ್ವತ್ರಿಕ ಮತದಾನದಿಂದ ಸ್ವತಂತ್ರವಾಗಿ ಆಯ್ಕೆಹೊಂದಿದ ಪ್ರತಿನಿಧಿಗಳ ಮೂಲಕವೇ ವ್ಯಕ್ತವಾಗಬೇಕು. ಇದು ಇವರ ವಾದದ ತಿರುಳು.

	ಮತದಾರ ಹಾಗೂ ವಿಧಾನಸಭೆಯ ನಡುವೆ ಇರುವ ಸಂಸ್ಥೆಯೇ ಪಕ್ಷ. ಮೊದಲು ಅಮೆರಿಕದ ಅಧ್ಯಕ್ಷರ ಆಯ್ಕೆಯಲ್ಲಿ ಪ್ರಧಾನವಾಗಿ ಕಂಡ ಈ ಪಕ್ಷ ಸಂಸ್ಥೆ 19ನೆಯ ಶತಮಾನದಲ್ಲಿ ಎಲ್ಲ ಕಡಗೂ ಹಬ್ಬಿ ಪಕ್ಷ ಮತ್ತು ಚುನಾವಣೆಗೆ ಪರಸ್ಪರಾವಲಂಬಿಗಳಾದುವು. ಈ ಪಕ್ಷತತ್ತ್ವ ರಾಷ್ಟ್ರೀಯ ವ್ಯಾಪ್ತಿಗೆ ಸೀಮಿತವಾಗಿ ಉಳಿಯಲಿಲ್ಲ. ಕಾರ್ಮಿಕ ಸಂಘಗಳೇ ಮುಂತಾದವುಗಳ ರೂಪದಲ್ಲಿ ಅಂತರರಾಷ್ಟ್ರಿಯ ವ್ಯಾಪ್ತಿ ಪಡೆಯಿತು. ಈಗ ಚುನಾವಣೆ ಕೇವಲ ಪಕ್ಷಗಳಿಗೆ ಸಂಬಂಧಿಸಿದಂತೆಯೇ ಅರ್ಥವಾಗುತ್ತದೆ. ರಾಷ್ಟ್ರೀಯ ಚುನಾವಣೆಯ ವಿವಿಧ ಹಂತಗಳನ್ನು ಪಕ್ಷಗಳೇ ನಿಯಂತ್ರಿಸುತ್ತವೆ. ಹೀಗಾಗಿ ಸ್ವೈಚ್ಛಿಕ ಮತದಾನವೆಂಬುದು ಸಂದಿಗ್ಧವಾದ ಮಾತಿದೆ. ಪಕ್ಷದ ಕಾರ್ಯಕ್ರಮ, ಪಕ್ಷದ ಹಿತ, ಒಡಂಬಡಿಕೆಗಳು, ಆಳುವ ಪಕ್ಷದ ಪ್ರಭಾವ ಇತ್ಯಾದಿಗಳಿಂದ ಮತದಾನ ಪ್ರಭಾವಿತವಾಗುತ್ತ ಬಂದಿದೆ. ಚುನಾವಣೆಯೆನ್ನುವುದು ಒಂದು ಔಪಚಾರಿಕ ವಿಧಿ. ಪಕ್ಷ ಆಗಲೇ ನಿರ್ಧರಿಸಿದಂಥ, ಅಧಿಕಾರ ವಹಿಸಲು ನಿಯೋಜಿಸಿದಂಥ ಒಬ್ಬನ ಆಯ್ಕೆಯನ್ನು ಸಕ್ರಮಗೊಳಿಸುವ ಕ್ರಮವಾಗುತ್ತದೆ-ಮದುವೆ ಮಾಡಿಕೊಳ್ಳಲು ನಿರ್ಧರಿಸಿ ಚರ್ಚಿಗೋ, ನೋಂದಣಿ ಕಚೇರಿಗೋ ಹೋದ ಭಾವೀ ದಂಪತಿಗಳಲ್ಲಿ ಒಬ್ಬೊಬ್ಬರನ್ನೂ, ನೀನು ಇವನ(ಳ)ನ್ನು ನ್ಯಾಯಬದ್ಧ ಗಂಡಹೆಂಡತಿ ಎಂದು ಸ್ವೀಕರಿಸಲು ಸಿದ್ಧಳಿರುವೆಯಾ ಎಂದು ಕೇಳಿದಂತೆ. ಆಗ ಒಲ್ಲೆನೆನ್ನುವ ಪ್ರಶ್ನೆಯೇ ಇಲ್ಲ. ಅದು ಆಯ್ಕೆ ಅಥವಾ ನಿರ್ಧಾರದ ಸಮಯವೇ ಅಲ್ಲ.

	ಒಬ್ಬನಿಗೆ ಒಂದು ಮತ ಎನ್ನುವ ತತ್ತ್ವ ರೂಢಿಗೆ ಬರಲು ಇಂಗ್ಲೆಂಡಿನಲ್ಲಿ ಸಹ ಒಂದು ಶತಮಾನವೇ ಕಳೆಯಿತು. ಹೆಂಗಸರಿಗೆ ಮತಾಧಿಕಾರವೂ ತಡವಾಗಿ ಬಂತು. 1832ರ ಸುಧಾರಣಾ ಅಧಿನಿಯಮದಲ್ಲಿದ್ದದ್ದು ಸೀಮಿತ ಮತದಾನ, ಅನೇಕ ಮತದಾನ ರದ್ದಾದ್ದು 1948ರಲ್ಲಿ. 1866ರಲ್ಲಿ ಸ್ವೀಡನಿನಲ್ಲಿ ಸ್ವತ್ತಿನ ಆಧಾರದ ಪ್ರಾತಿನಿಧ್ಯ ಹೋಯಿತು. 1917ರಲ್ಲಿ ಬೆಲ್ಜಿಯಮ್‍ನಲ್ಲಿ 25 ವರ್ಷದವರಿಗೆ ಮತಾಧಿಕಾರ ಕೊಡಲಾಯಿತಾದರೂ ಅದು ಸುಶಿಕ್ಷಿತರಿಗೆ, ಇತರ ವಿಶಿಷ್ಟರಿಗೆ ಸೀಮಿತವಾಗಿತ್ತು. ಫ್ರಾನ್ಸಿನಲ್ಲಿ 1489ರ ವರೆಗೂ ಪರೋಕ್ಷ ಚುನಾವಣೆ ಇತ್ತು. ಸರದಾರರ, ಪಾದರಿಗಳ ಮತಕ್ಷೇತ್ರಗಳಿದ್ದುವು. ಕೊಡುವ ತೆರಿಗೆಯ ಆಧಾರದ ಮೇಲೆ ಮತಾಧಿಕಾರ 1791ರಲ್ಲೂ ವಯಸ್ಕ ಮತದಾನ 1793ರಲ್ಲೂ ಬಂದುವು. ಅದರೆ ಇದು ತಾತ್ಕಾಲಿಕವಾಗಿತ್ತು. ಮುಂದೆ ಕ್ರಾಂತಿಯಾಯಿತು. ಮತ್ತೆ ವ್ಯಾಪಕ ಮತಾಧಿಕಾರ ಬಂದದ್ದು ಅನಂತರವೇ. ಒಂದನೆಯ ಮಹಾಯುದ್ಧದ ಹೊತ್ತಿಗೆ ಯೂರೋಪಿನ ಎಲ್ಲ ರಾಜ್ಯಗಳಲ್ಲೂ ವಯಸ್ಕ ಮತದಾನ ಜಾರಿಗೆ ಬಂತು. ಕೆಲವು ಕಡೆ ಮಹಿಳೆಯರಿಗೂ ಮತಾಧಿಕಾರ ಪ್ರಾಪ್ತವಾಯಿತು.

	ಆಸ್ತಿವಾದಿಗಳು ಒಬ್ಬನಿಗೆ ಒಂದು ಮತ ಎಂಬ ತತ್ತ್ವವನ್ನು ವಿರೋಧಿಸಿದರು. ಸಾಂಸ್ಕøತಿಕವಾದ ಮತ್ತು ಆರ್ಥಿಕವಾದ ಒತ್ತಡಗಳನ್ನು ತಡೆಯಲು ಸಮರ್ಥರಾದವರಿಗೆ ಮಾತ್ರ ಮತಾಧಿಕರವಿರಬೇಕು. ದುರ್ಬಲರು ಇಂಥ ಒತ್ತಡಕ್ಕೆ ಒಳಗಾಗಿ ಸ್ವವಿವೇಕವನ್ನು ಬಳಸಲು ಅಸಮರ್ಥರಾಗುತ್ತಾರೆ-ಎಂಬುದು ಇವರ ವಾದ. ಬಹಿರಂಗವಾಗಿ ಮತ್ತು ಬಾಯಿ ಹೇಳಿಕೆಯ ಮೂಲಕ ಮತ ಚಲಾಯಿಸುವ ಪದ್ಧತಿ ಡೆನ್ಮಾರ್ಕಿನಲ್ಲಿ 1901ರವರೆಗೂ ಐಸ್‍ಲೆಂಡಿನಲ್ಲಿ 1906ರವರೆಗೂ ಹಂಗರಿಯಲ್ಲಿ 1930ರವರೆಗೂ ಇದ್ದುವು. ಇಂಗ್ಲೆಂಡ್ ಮಾತ್ರ 1867ರ ಅಧಿನಿಯಮವಾದ ಐದು ವರ್ಷಗಳಲ್ಲೇ ಗುಪ್ತಮತದಾನ ಪದ್ದತಿಯನ್ನು ಜಾರಿಗೆ ತಂದಿತು.

	ಬಹುಮತ ತತ್ತ್ವೆಂದರೆ ಅಂಶದ ಇಚ್ಚೆಯೇ ಪೂರ್ಣದ ಇಚ್ಛೆ ಎಂದಂತೆ. ಸರಳ ಬಹುಮತ ತತ್ತ್ವ ಇಂಗ್ಲೆಂಡಿನಲ್ಲಿ ಮಧ್ಯಯುಗದಿಂದಲೇ ಜಾರಿಯಲ್ಲಿ ಬಂತು. ಅಮೆರಿಕದಲ್ಲೂ ಇದು ಪ್ರಮಾಣಿತ ಪದ್ಧತಿಯಾಯಿತು. ಖಚಿತ ಬಹುಮತ. ಪರೋಕ್ಷ ಚುನಾವಣೆ. ಏಕಸದಸ್ಯ ಮತ್ತು ಬಹುಸದಸ್ಯ ಚುನಾವಣಾ ಕ್ಷೇತ್ರಗಳು, ಅನುಪಾತೀಯ ಪ್ರಾತಿನಿಧಿತ್ವ (ಪ್ರಪೋರ್ಷನಲ್ ರೆಪ್ರೆಸೆಂಟೇಷನ್ ಇವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.	
ಭಾರತದಲ್ಲಿ : ಭಾರತದಲ್ಲಿ ರಾಜ್ಯಶಾಸ್ತ್ರಾಧ್ಯಯನ ಕ್ರಿ.ಪೂ. 500ರಿಂದಲೇ ವ್ಯವಸ್ಥಿತವಾಗಿ ಪ್ರಾರಂಭವಾಯಿತೆನ್ನಬಹುದು. ಆರಂಭದೆಶೆಯಲ್ಲಿ ರಾಜಕೀಯ ಶಾಸ್ತ್ರಕ್ಕೆ ಮೀಸಲಾದ ಗ್ರಂಥಗಳು ಇರದಿದ್ದರೂ ವೇದ ಹಾಗೂ ಬ್ರಾಹ್ಮಣಗಳಲ್ಲಿ ಅಲ್ಲಲ್ಲಿ ಪಸರಿಸಿರುವ ವಾಕ್ಯವೃಂದಗಳು ತತ್ಕಾಲೀನ ಆಡಳಿತ ವ್ಯವಸ್ಥೆಯನ್ನು ಕುರಿತ ಸಿದ್ಧಾಂತ ಹಾಗೂ ರೂಢಿಗಳ ಮೇಲೆ ಕೆಲವೊಮ್ಮೆ ಅಸ್ಪಷ್ಟವಾಗಿಯೂ ಕೆಲವೊಮ್ಮೆ ಸ್ಫುಟವಾಗಿಯೂ ಬೆಳಕು ಚೆಲ್ಲುತ್ತದೆ. ಋಗ್ವೇದದಲ್ಲಿ ಈ ವಿಷಯ ಸ್ವಲ್ಪ ಬಂದಿದೆ. ಆದರೆ ಅಥರ್ವ ವೇದದಲ್ಲಿ ಸಾಕಷ್ಟು ವಿಪುಲವಾಗಿ ಇದರ ಪ್ರಸ್ತಾಪವುವುಂಟು. ಬ್ರಾಹ್ಮಣಗಳಲ್ಲಿ ಮತ್ತು ಯಜುಸ್ಸಂಹಿತೆಗಳಲ್ಲಿ ರಾಜನ ಪಟ್ಟಾಭಿಷೇಕದ ವಿವರಗಳು ಸಿಗುತ್ತವೆ. ಇವೆಲ್ಲ ರಾಜನ ಸ್ಥಾನಮಾನ, ಇತರ ಜಾತಿಯ-ವಿಶೇಷತಃ ಬ್ರಾಹ್ಮಣ ಕ್ಷತ್ರಿಯ ಪ್ರಜರ - ಹಕ್ಕು ಮತ್ತು ಸ್ಥಾನ ಗೌರವಗಳ ಕುತೂಹಲಕರ ವಿವರಗಳುಂಟು. ಕ್ರಿ.ಪೂ. 7-8ನೆಯ ಶತಮಾನಗಳ ಹೊತ್ತಿಗೆ ರಾಜ್ಯಶಾಸ್ತ್ರಕ್ಕೆ ಮೀಸಲಾದ ಗ್ರಂಥಗಳೇ ರಚಿತವಾಗಿದ್ದಿರಬಹುದು. ಅವು ಈಗ ಉಪಲಬ್ಧವಿಲ್ಲದಿದ್ದರೂ ಮಹಾಭಾರತದ ಶಾಂತಿಪರ್ವದಲ್ಲಿಯ ಭೀಷ್ಮ ಯುಧಿಷ್ಠರ ಸಂವಾದದಿಂದ ಅಂಥ ವ್ಯವಸ್ಥಿತ ಅಧ್ಯಯನ ಆಗಿದ್ದಂತೆ ಭಾವಿಸಬಹುದು. ಅಲ್ಲಿ ಮಂಧಾತ ಮುಂತಾದ ರಾಜರ ಉದಾಹರಣೆ ಹೇಳಿ, ಅವರಿಗೆ ಸಲಹೆಗಾರರಾಗಿದ್ದ ಋಷಿಗಳ ಮತ್ತು ತಜ್ಞ ವಿದ್ವಾಂಸರ ವಿಚಾರವನ್ನೂ ಭೀಷ್ಮ ಪ್ರಸ್ತಾವಿಸುತ್ತಾನೆ. ರಾಜನಿಗೆ ಒಂದು ತಜ್ಞ ಸಲಹಾಮಂಡಲಿಯಿರುತ್ತಿತ್ತೆಂದು ತಿಳಿದುಬರುತ್ತದೆ. ಇಂಥ ಸಲಹಾಮಂಡಳಿ-ರಾಜನ ಆಯ್ಕೆಯದೇ ಆಗಿದ್ದರೂ- ಪ್ರಜಾಸಮೂಹಕ್ಕೆ ಸಮೀಪವರ್ತಿಗಳಾಗಿದ್ದವರನ್ನು ಒಳಗೊಂಡಿರುತ್ತಿತ್ತೆಂದು ಹೇಳಬಹುದು. ಕ್ರಿ.ಪೂ. 4ನೆಯ ಶತಮಾನದಲ್ಲಿ ಬರೆಯಲಾದ ಕೌಟಿಲ್ಯನ ಆರ್ಥಶಾಸ್ತ್ರ ಈ ವಿಚಾರದಲ್ಲಿ ದೊರೆತ ಮಹತ್ತ್ವದ ಗ್ರಂಥ. ಇದರಲ್ಲಿ ರಾಜ್ಯಶಾಸ್ತ್ರ ವಿವಿಧ ವಿಷಯಗಳೂ ವಿವಿಧ ಪ್ರಕಾರಗಳ ರಾಜ್ಯಗಳ ವಿವರಗಳೂ ಸಿಗುತ್ತವೆ. ಮದ್ರ, ಕಾಂಭೋಜ, ಲಿಚ್ಚವಿ ಹಾಗೂ ಮಲ್ಲರ ಗಣರಾಜ್ಯಗಳ ಪ್ರಸ್ತಾಪ ಬರುತ್ತದೆ. ಇವೆಲ್ಲ ಮೌರ್ಯರ ಕಾಲದ ಆರಂಭದಲ್ಲಿ ಅಸ್ತಿತ್ವದಲ್ಲಿ ಇದ್ದುದಾಗಿ ತಿಳಿದುಬರುತ್ತದೆ.

	ಭಾರತದಲ್ಲೂ ಪ್ರಭುತ್ವ ಒಂದು ಸಾಮಾಜಿಕ ಅವಶ್ಯಕತೆಯಾಗಿ ಆಸ್ತಿತ್ವದಲ್ಲಿ ಬಂತು. ಅನಾಯಕತ್ವದಿಂದ ಬೇಸತ್ತ ಜನಸಮೂಹ ಮೊದಲು ಸಮಾಜ ವ್ಯವಸ್ಥೆಯ ನಿಯಮಗಳನ್ನು ಸ್ವಸಮ್ಮತಿಯಿಂದ ಮಾಡಿಕೊಂಡಿತು. ಅವು ಸಫಲವಾಗದಿದ್ದಾಗ ರಾಜತ್ವೆಂಬ ಸಂಸ್ಥೆಯ ನಿರ್ಮಾಣಕ್ಕೆ ಅವಕಾಶವಾಯಿತು. ರಾಜನ ಆಳುವ ಹಕ್ಕು ಭಾಗಶಃ ದೈವದತ್ತವೆಂದೂ ಭಾಗಶಃ ಆಳಿಸಿಕೊಳ್ಳುವ ಜನರ ಸಮ್ಮತಿಗೆ ಒಳಪಟ್ಟದ್ದೆಂದೂ ಶಾಂತಿಪರ್ವ ಹೇಳುತ್ತದೆ. ದೀರ್ಘನಿಕಾಯ ಗ್ರಂಥದಲ್ಲಿ ಅನಾಯಕತ್ವದಿಂದ ಬೇಸತ್ತ ಜನರು ಮಹಾಜನಸಮ್ಮತನೊಬ್ಬನನ್ನು ಆರಿಸಿಕೊಂಡು, ಆತ ಮಾಡುವ ಸೇವೆಗೆ-ಶಾಂತಿ, ಸುವ್ಯವಸ್ಥೆಗಳಿಗೆ-ಬದಲಾಗಿ ತಾವು ಬೆಳೆದ ಬತ್ತದ ಭಾಗ ಕೊಡಲು ಒಪ್ಪಿದುದಾಗಿ ಹೇಳಲಾಗಿದೆ. ಮನುವನ್ನು ಸಹ ಜನರೇ ರಾಜನನ್ನಾಗಿ ಮಾಡಿದರೆಂದು ಹೇಳಬಹುದಾಗಿದೆ.

	ರಾಜರ ಅಧಿಕಾರಗಳು ಅನಿಯಂತ್ರಿತವಾಗಿರಲಿಲ್ಲ. ಅವು ಧರ್ಮಶಾಸ್ತ್ರಗಳ ನೇಮಗಳಿಂದ ನಿಯಂತ್ರಿತವಾಗಿದ್ದುವು. ವಿರಜ, ಕರ್ದಮ, ಅನಂಗ ಇವರೆಲ್ಲ ಇಂಥ ಸೀಮಿತ ಅಧಿಕಾರದ ರಾಜರಾಗಿದ್ದರು. ವೇನ ರಾಜನ ನಿರಂಕುಶ ಆಳ್ವಿಕೆಯಿಂದ ಬೇಸತ್ತ ಜನ ಅವನನ್ನು ಕೊಂದುಹಾಕಿದರೆನ್ನಲಾಗಿದೆ. ಏಕಾಧಿಪತ್ಯವಿದ್ದರೂ ರಾಜಸತ್ತೆ ಧರ್ಮಶಾಸ್ತ್ರನಿಯಮಗಳನ್ನೂ ಜನಸಮ್ಮತಿಯನ್ನೂ ಆಶ್ರಯಿಸಿದ್ದುದಕ್ಕೆ ಹೀಗೆ ಅಲ್ಲಲ್ಲಿ ನಿದರ್ಶನಗಳು ಸಿಗುತ್ತವೆ. ರಾಜ್ಯಗಳ ವಿಸ್ತಾರ ಹೆಚ್ಚಿದಂತೆಲ್ಲ ರಾಜರು ಮಹಾರಾಜರಾಗಿ, ಸಾಮ್ರಾಟರಾಗಿ, ಚಕ್ರವರ್ತಿಗಳಾಗಿ ಹೆಚ್ಚು ನಿರಂಕುಶರಾದದ್ದು ಕಂಡುಬರುತ್ತದೆ. ಈ ಚಕ್ರವರ್ತಿಗಳು ರಾಜರ ಸಭೆಗಳನ್ನು ಏರ್ಪಡಿಸಿದ್ದ ಪ್ರಸ್ತಾಪ ವೇದಗಳಲ್ಲಿ ಬರುತ್ತದೆ. ಇವು ರಾಜರನ್ನೊಳಗೊಂಡುದೇ ಆದರೂ ಇದಕ್ಕೆ ಪ್ರಾಮುಖ್ಯವಿದ್ದಂತೆ ಕಾಣುತ್ತದೆ.

	ಉತ್ತರ ಕುರು ಹಾಗೂ ಉತ್ತರ ಮುದ್ರ ರಾಜ್ಯಗಳಲ್ಲಿ ವೈರಾಜ್ಯ (ರಾಜನಿಲ್ಲದ ಪ್ರಭುತ್ವ) ಇತ್ತೆಂದು ಐತ್ತರೇಯ ಬ್ರಾಹ್ಮಣದಲ್ಲಿ ಹೇಳಿದೆ. ವಿರಾಟ್ ಎಂಬುದು ರಾಜವಾಚಕವಲ್ಲ. ಜನವಾಚಕ ಎಂದು ಇದರಿಂದ ಹೇಳಬಹುದು. ಅಲೆಗ್ಸಾಂಡರ್ ಭಾರತಕ್ಕೆ ಬಂದಾಗ ಇಂಥ ಗಣರಾಜ್ಯಗಳಿದ್ದುದನ್ನು ಆಗಿನ ಗ್ರೀಕ್ ಲೇಖಕರು ಪ್ರಸ್ತಾವಿಸಿದ್ದಾರೆ. ನ್ಯಾಸ ಮತ್ತು ಸಿಬಿ ಎಂಬುವು ನಗರರಾಜ್ಯಗಳಾಗಿದ್ದುವೆಂದೂ ನಾಗರಿಕರಿಗೆ ಸ್ವಾತಂತ್ರ್ಯವಿತ್ತೆಂದೂ ಗ್ರೀಕ್ ಇತಿಹಾಸದಿಂದ ತಿಳಿದುಬರುತ್ತದೆ. ಇಂಥ ಅನೇಕ ನಗರರಾಜ್ಯಗಳ ಸಂಯುಕ್ತ ವ್ಯವಸ್ಥೆ ರೂಪುಗೊಂಡು ಅದಕ್ಕೊಬ್ಬ ಮುಖಂಡರಾಜನನ್ನು ಆರಿಸಿಕೊಳ್ಳುವ ಪರಿಪಾಟಿಯಿತ್ತೆಂಬುದಕ್ಕೆ ಕುರುಪಾಂಚಾಲ, ಶೂದ್ರಕ, ಮಾಳವ ಮತ್ತು ಲಿಚ್ಛವಿ ಮಲ್ಲರ ಸಂಯುಕ್ತ ವ್ಯವಸ್ಥೆಗಳೇ ನಿದರ್ಶನ. ಲಿಚ್ಚವಿ ಮಲ್ಲರ ಸಂಯುಕ್ತ ಸಭೆಯಲ್ಲಿ 18 ಸದಸ್ಯರು-ಅವರಲ್ಲಿ 9 ಜನ ಸಂಯುಕ್ತ ವ್ಯವಸ್ಥೆಗೊಳಪಟ್ಟ ರಾಜ್ಯಗಳಿಂದ ಚುನಾಯಿತರಾದವರು-ಇರುತ್ತಿದ್ದರು. ಹೀಗೆ ಅಲ್ಲಿ ಒಂದು ವಿಧದ ಚುನಾವಣೆ ರೂಪುಗೊಳ್ಳುತ್ತ ಬಂದಿತ್ತು.

	ಸಮಿತಿ ಎಂಬ ಸಂಸ್ಥೆಗೆ ವೇದಕಾಲದಿಂದಲೂ ಪ್ರಾಧಾನ್ಯವಿದ್ದಂತೆ ಕಾಣುತ್ತದೆ. ಇದು ವಿಶಃ ಎಂದು ಆಗ ಹೆಸರಾದ ಜನಾಂಗದ ಜನರ ಸಭೆಯಾಗಿತ್ತೆಂದು ತೋರುತ್ತದೆ. ವಿದಥ ಎಂಬ ಮೂಲ ಜನಸಂಸ್ಥೆಯ ವಿವಿಧ ರೂಪಗಳೇ ಸಮಿತಿ, ಸಭೆ, ಸೇನಾ ಮುಂತಾದವು. ಕಾರ್ಯವ್ಯಾಪ್ತಿಯಲ್ಲಿ ಇವುಗಳಲ್ಲಿ ವ್ಯತ್ಯಾಸವಿದ್ದಿತು. ಸಮಿತಿ ಸಭೆಗಳ ಪರಸ್ಪರ ಸಂಬಂಧದ ವಿವರ ಸಿಗುವುದಿಲ್ಲ. ಸಹಧರ್ಮಿಗಳಾದ ಸಜ್ಜನರಿಂದ ಕೂಡಿದ್ದು ಸಭಾ-ಎಂದು ಪಾರಸ್ಕರ ಗೃಹ್ಯಸೂತ್ರ ಹೇಳುತ್ತದೆ. ಇಲ್ಲಿ ಆಯ್ಕೆ ಸೀಮಿತ ಪರಿಧಿಯಲ್ಲಿತ್ತೆಂದು ಸಹಜವಾಗಿ ತಿಳಿಯಬಹುದು. ಸಮಿತಿ ಹೆಚ್ಚು ಪ್ರಭಾವಶಾಲಿಯಾಗಿದ್ದಂತೆ ತೋರುತ್ತದೆ. ಸಮಿತಿಗಳಲ್ಲಿ ಸದಸ್ಯರು ಮನಂಬುವಂತೆ ಮಾತನಾಡಬೇಕಿತ್ತು. ಶ್ವೇತಕೇತನು ಪಾಂಚಾಲರ ಸಮಿತಿಗೆ ಬಂದು ಭಾಗವಹಿಸಿದನಂತೆ, ಚರ್ಚೆ, ವಾಕ್ ಸ್ವಾತಂತ್ರ್ಯ ಒಂದು ಮಟ್ಟ ತಲುಪಿದುದನ್ನು ಇದು ಸೂಚಿಸುತ್ತದೆ. ಸಮಿತಿಯ ಮುಖಂಡನಿಗೆ ಈಶಾನ ಎಂದು ಕರೆಯಲಾಗುತ್ತಿತ್ತು. ಸಮಿತಿಯ ಸದಸ್ಯರು ಪ್ರತಿನಿಧಿಗಳಾಗಿರುತ್ತಿದ್ದರು. ಗ್ರಾಮ ಎಂಬುದು ಸಹ ಕುಟುಂಬದ ಅನಂತರ ರೂಪುಗೊಂಡ ಜನಸಂಸ್ಥೆ. ಗ್ರಾಮದ ಮುಖ್ಯನಿಗೆ ಗ್ರಾಮಣಿ ಎಂದು ಕರೆಯಲಾಗುತ್ತಿತ್ತು. ಗ್ರಾಮಗಳೇ ಸಮಿತಿಗೆ ಆಧಾರವಾಗಿದ್ದುವು. ಇವೆಲ್ಲವುಗಳಲ್ಲಿ ಚುನಾವಣೆಯ ಒಂದು ಅಂಶ ಹಾಸುಹೊಕ್ಕಾಗಿ ಇದ್ದುದು ನಿಸ್ಸಂದೇಹವಾಗಿದ್ದರೂ ಚುನಾವಣೆಯ ಪದ್ಧತಿ ಸ್ಪಷ್ಟವಾಗಿ ತಿಳಿಯುವುದಿಲ್ಲ. ಸಾಮ್ರಾಜ್ಯ ಪದ್ಧತಿಗಳು ಪ್ರಬಲವಾದ ಅನಂತರ ಈ ಸಮಿತಿಗಳು ಕಾಣುವುದಿಲ್ಲ.

	ಭಾರತೀಯ ಗಣರಾಜ್ಯಗಳು ವೇದಾನಂತರದ ಕಾಲದಲ್ಲಿ ಇದ್ದುವು. ರಾಜರಹಿತ ಹಿಂದೂ ಆಡಳಿತಪದ್ಧತಿಯು ವಿವರಣೆ ಭಾರತೀಯ ವೈಧಾನಿಕ ಇತಿಹಾಸದಲ್ಲೇ ಮಹತ್ತ್ವಪೂರ್ಣವಾದದ್ದು. ಸಂಘ, ಜನಪದ, ಗಣ ಇವು ಈ ರಾಜರಹಿತ ರಾಜ್ಯ ಘಟಕಗಳಿಗಿದ್ದ ಹೆಸರುಗಳು. ಮೆಗಾಸ್ತನೀಸ್ ಇಂಥ ರಾಜ್ಯಗಳ ಅಸ್ತಿತ್ವವನ್ನು ಪ್ರಸ್ತಾವಿಸುತ್ತಾನೆ. ಬುದ್ಧನ ಪ್ರದೇಶದ ಸುತ್ತ ಗಣರಾಜ್ಯಗಳಿದ್ದುವು. ಜನಚಿತ್ತ ಎಂಬುದನ್ನು ಪಬ್ಲಿಕ್ ಮೈಂಡ್ ಎಂಬ ಅರ್ಥದಲ್ಲಿ ಬಳಸಲಾಗಿದೆ. ಒಳ್ಳೆಯ ಮನಸ್ಸುಗಳು ಸಮೂಹವುಳ್ಳ ಜನತೆಯೇ ಗಣ-ಎಂಬುದು ಅಭಿದಾನ ರಾಜೇಂದ್ರದ ಮಾತು. ಗಣರಾಜ್ಯ ಎಂಬುದನ್ನು ಸಂಖ್ಯೆಯ ಆಡಳಿತ, ಸಮೂಹದ ಆಡಳಿತ ಎಂಬಂತೆ ಬೌದ್ಧ ಸಾಹಿತ್ಯದಲ್ಲಿ, ಮಹಾಭಾರತದಲ್ಲಿ ಬಳಸಲಾಗಿದೆ. ಸಂಘವನ್ನು ಗಣ ಎಂಬ ಅರ್ಥದಲ್ಲಿ ಕೌಟಿಲ್ಯ ಬಳಸಿದ್ದಾನೆ.

	ಮುಂಚಿನ ಸಮಿತಿಗಳಿಗಿಂತ ಹೆಚ್ಚಾಗಿ ಚುನಾವಣೆ ಈ ಗಣರಾಜ್ಯಗಳಲ್ಲಿ ಹೆಚ್ಚು ಸ್ಪಷ್ಟರೂಪ ತಳೆದಂತೆ ಕಂಡುಬರುತ್ತದೆ. ಸಂಘದ ಆಡಳಿತಪದ್ಧತಿಯ ವಿಚಾರವಾಗಿ ಬುದ್ಧನನ್ನು ಕೇಳಿದಾಗ, ಗಣರಾಜ್ಯಪದ್ಧತಿಯನ್ನು ಹೋಲುವ ಮತಗಣನೆ, ಬಹುಮತ, ಕೋರಂ ಮುಂತಾದವುಗಳ ಬಗ್ಗೆ ಭಿಕ್ಷುಗಳಿಗೆ ಆತ ವಿವರಿಸುತ್ತಾನೆ. ಮತ ಹಾಕುವ ಸಾಧನಕ್ಕೆ (ಬ್ಯಾಲಟ್) ಶಾಲಕಾ ಎಂದು ಹೆಸರಿತ್ತಂತೆ. ಕನಿಷ್ಠ ಪೂರಕ ಸದಸ್ಯಸಂಸ್ಥೆಯನ್ನು ಪರಿಶೀಲಿಸುವಾಗ ಗಣಪೂರಕ ಎಂಬ ಅಧಿಕಾರಿ. ಬೌದ್ಧ ಸಂಘಗಳಲ್ಲಿ ಮತದಾನ ಗುಪ್ತವಾಗಿಯೂ (ಗೂಲ್ಹಕ) ಕೆಲವು ಸಲ ಮೆಲ್ಲಗೆ ಉಸುರುವುದರಿಂದಲೂ (ಸಕರ್ಣಜಾಪಕಮ್) ಕೆಲವು ಸಲ ಬಹಿರಂಗವಾಗಿಯೂ (ವಿವಾಟಕಮ್) ನಡೆಯುತ್ತಿತ್ತು. ಮತ ಸಂಚಯಿಸುವವನಿಗೆ ಶಾಲಾಕಾಗ್ರಾಹಕನೆನ್ನಲಾಗುತ್ತಿತ್ತು. ಹೀಗೆ ಇಂಥ ಚುನಾವಣೆಯನ್ನು ಅನುಸರಿಸುವ ಸಂಘ ಅಥವಾ ಗಣಗಳು ಧಾರ್ಮಿಕಸಂಸ್ಥೆಗಳೂ ಆಗಿದ್ದವು. ರಾಜಕೀಯ ಸಂಸ್ಥೆಗಳೂ ಆಗಿದ್ದವು. ಮನುಷ್ಯ ನಾಗರಿಕ ಮಾರ್ಗದಲ್ಲಿ ನಿರ್ಮಿಸಿಕೊಂಡ ಒಂದು ಸಂಸ್ಥೆಯೇ ಗಣವಾಗಿತ್ತು. ಯೌಧೇಯ, ಶಾಕ್ಯ, ಮಾಳವ, ಲಿಚ್ಚವಿಗಳು ಇಂಥ ಗಣಗಳಾಗಿದ್ದವು. ಇವು ಇಂದು ನಾವು ತಿಳಿದ ಅರ್ಥದಲ್ಲಿ ಪ್ರಜಾಸತ್ತಾತ್ಮಕ ಗಣರಾಜ್ಯಗಳಾಗಿದ್ದುವೆಂದು ಹೇಳುವದು ಕಷ್ಟವಾದರೂ ಒಂದು ಅರ್ಥದಲ್ಲಿ ಇವು ಗಣರಾಜ್ಯಗಳಾಗಿದ್ದುವು. ಸಾರ್ವಭೌಮಾಧಿಕಾರ ಎಲ್ಲ ಜನರಲ್ಲಿ ಅಲ್ಲವಾದರೂ ಕೆಲವು ಜನರ ಸಮೂಹದಲ್ಲಿ ಅಧಿಷ್ಟಿತವಾಗಿರುತ್ತಿತ್ತು. ಏಕಾಧಿಪತ್ಯವಿರುತ್ತಿದ್ದಿಲ್ಲ. ಅನೇಕ ಸಲ ವಿಶಿಷ್ಟ ಪ್ರದೇಶದಲ್ಲಿ ನೆಲಸಿದ ಅಥವಾ ಜನ ನೆಲಸುವಂತೆ ನೆರವಾದ ಕ್ಷತ್ರಿಯಕುಲಸಮೂಹವೇ ಗಣವಾಗುತ್ತಿತ್ತು. ಈ ಗಣರಾಜ್ಯಗಳು ಅಥೆನ್ಸ್, ಸ್ಪಾರ್ಟ ಮತ್ತು ವೆನಿಸ್ಸಿನ ರಿಪಬ್ಲಿಕ್ ಮಾದರಿಯವಾಗಿದ್ದುವೆಂದು ಹೇಳಬಹುದು. ಆಳುವ ವರ್ಗದ ಆಯ್ಕೆಯಾದ ಕ್ಷತ್ರಿಯರಲ್ಲದವರನ್ನು ಹೊರಗಿಟ್ಟ ನಿದರ್ಶನಗಳು ಬೇಕಾದಷ್ಟು ಸಿಗುತ್ತವೆ.

	ಈ ಗಣರಾಜ್ಯಗಳಲ್ಲಿ ಕೇಂದ್ರಸಭೆಗಳ ಪಾತ್ರ ಮಹತ್ತ್ವದ್ದಾಗಿತ್ತು. ಸಾರ್ವಭೌಮ ಅಧಿಕಾರ ಈ ಸಭೆಯಲ್ಲಿ ನಿಷ್ಠವಾಗಿರುತ್ತಿತ್ತು. ಯೌಧೇಯ ಗಣದ ಸಭಾಸದರ ಸಂಖ್ಯೆ 5.000, ಲಿಚ್ಚವಿಗಳ ಗಣದ ಸಭಾಸದರ ಸಂಖ್ಯೆ 7,707. ಶೂದ್ರಕರು ತಮ್ಮ ಗಣದ 150 ಮುಖಂಡರನ್ನು ಅಲೆಗ್ಸಾಂಡರನ ಹತ್ತಿರ ಸಂಧಾನಕ್ಕಾಗಿ ಕಳಿಸಿದ್ದರು. ಈ ವ್ಯವಸ್ಥೆಯಲ್ಲಿ ಕ್ಷತ್ರಿಯರಿಗೆ ಸಮಾನರಾದ ಗೌರವ ಬ್ರಾಹ್ಮಣರಿಗೆ ಇದ್ದಂತೆ ತೋರುತ್ತದೆ. ಇನ್ನೊಂದು ಪ್ರಭಾವಿ ವರ್ಗವಾದ ವೈಶ್ಯರಿಗೂ ಇತರ ಪ್ರತಿಷ್ಠಿತರಿಗೂ ಒಂದು ಬಗೆಯ ಪ್ರಾತಿನಿಧ್ಯವಿದ್ದಿರಲು ಶಕ್ಯವಿದೆ. ಹಲವಾರು ಸದಸ್ಯರು ಬಹುಶಃ ಶ್ರೀಮಂತ ಕ್ಷತ್ರಿಯ ವಂಶದವರಾಗಿದ್ದು, ರಾಜ್ಯದಲ್ಲಿ ವಿವಿಧ ಪದಾಧಿಕಾರಿಗಳಾಗಿದ್ದಿರಬಹುದು. ಜನಸಾಮಾನ್ಯರ ಪ್ರಾತಿನಿಧ್ಯ ದೊರಕಿಸಲು ನಿಯತಕಾಲಿಕ ಚುನಾವಣೆಗಳು ನಡೆಯುತ್ತಿದ್ದುವೆನ್ನಲು ಸಾಕ್ಷ್ಯ ಸಿಗುವುದಿಲ್ಲ. ಆದರೆ ಆಡಳಿತಾಂಗ ಸಂಪೂರ್ಣವಾಗಿ ಈ ಕೇಂದ್ರ ಸಭೆಗೆ ಅಧೀನವಾಗಿರುತ್ತಿದ್ದುದ್ದು ಮಾತ್ರ ಸ್ಪಷ್ಟವಿದೆ. ಈ ಸಭೆಯಲ್ಲಿ ಗುಂಪುಗಾರಿಕೆ. ಅಧಿಕಾರ, ಪ್ರಭಾವಗಳ ಸೆಳೆತಗಳಿದ್ದ ನಿದರ್ಶನಗಳೂ ಕಾಣಬರುತ್ತವೆ. (ಮಹಾಭಾರತ, ಅರ್ಥಶಾಸ್ತ್ರ ಹಾಗೂ ಬೌದ್ಧಸಾಹಿತ್ಯ).

	ಈ ಗಣರಾಜ್ಯ ಪದ್ಧತಿಯಲ್ಲಿ ರಾಜಕೀಯ ಪಕ್ಷಗಳಿದ್ದುವೆಂಬುದು ಗಮನಾರ್ಹವಾದ ವಿಚಾರ. ದ್ವಂದ್ವ, ವ್ಯುತ್ಕ್ರಮ್ಯ, ವಗ್ರ್ಯ, ಗೃಹ್ಯ, ಪಕ್ಷ ಇತ್ಯಾದಿ ಶಬ್ದಗಳನ್ನು ಗಮನಿಸಬೇಕು. ಆಯಾ ಮುಖಂಡರ ಹೆಸರಿನಲ್ಲೇ ಸಾಮಾನ್ಯವಾಗಿ ಪಕ್ಷಗಳು ಇರುತ್ತಿದ್ದುವು (ಉದಾ: ವಾಸುದೇವ ವಗ್ರ್ಯ, ಅಕ್ರೂರ ಪಕ್ಷ್ಯ). ಈ ಪಕ್ಷಗಳ ಮತ್ತು ಸಭೆಗಳ ಪರಸ್ಪರ ಸಂಬಂಧ ಮತ್ತು ವ್ಯವಹಾರ ನಿಯಮಗಳ ವ್ಯವಸ್ಥಿತ ವಿವರ ಸಿಗುವುದಿಲ್ಲವಾದರೂ ಈ ಬೆಳೆವಣಿಗೆಗೆ ಪುಷ್ಟವಾದ ಹಿನ್ನೆಲೆ ಇರುವುದನ್ನು ಒಪ್ಪಲೇಬೇಕಾಗುತ್ತದೆ. ಏಕಾಧಿಪತ್ಯವುಳ್ಳ ರಾಜ್ಯಗಳು ವಿಸ್ತಾರಗೊಂಡಂತೆ ಈ ಗಣರಾಜ್ಯಗಳು ಮಾಯವಾಗುತ್ತ ಬಂದುವು. ಅಂತೂ ಭಾರತದಲ್ಲಿ ಚುನಾವಣೆಯ ಪದ್ಧತಿ ಕ್ರಿಸ್ತಪೂರ್ವದ ಶತಮಾನಗಳಲ್ಲಿಯೇ ಸಮಿತಿ, ಸಭೆ, ಆಮೇಲೆ ಸಂಘ, ಜನಪದ, ಗ್ರಾಮ, ಗಣ ಮುಂತಾದ ರಾಷ್ಟ್ರೀಯ ಘಟಕಗಳಲ್ಲಿ ಕಂಡುಬರುತ್ತವೆ. ಆದರೆ ಸಮಾಜದ ಪ್ರತಿಯೊಬ್ಬನಿಗೂ ಮತಾಧಿಕಾರ ದೊರೆತು, ಇಂದಿನ ವ್ಯಾಪಕ ಅರ್ಥದಲ್ಲಿ ಪ್ರಾತಿನಿಧ್ಯತತ್ತ್ವ ಕಾರ್ಯರೂಪದಲ್ಲಿ ಬಂದದ್ದು ಇತ್ತೀಚಿನ ಕಾಲದಲ್ಲೇ ಎಂದು ಹೇಳಬೇಕಾಗುತ್ತದೆ.

	ಆಧುನಿಕ ಯುಗ : ಆಧುನಿಕ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಚುನಾವಣೆಗಳಿಗೆ ಮೂಲಭೂತ ಮಹತ್ತ್ವ ಬಂದಿದೆ. ಪ್ರಾಚೀನ ಗ್ರೀಕ್ ಮತ್ತು ಭಾರತೀಯ ಜನರು ತಿಳಿದಿದ್ದ ಲೋಕಸತ್ತೆಯ ಕಲ್ಪನೆಗೂ ಇಂದು ನಾವು ತಿಳಿದುಕೊಂಡಿರುವ ಲೋಕಸತ್ತೆಯ ಕಲ್ಪನೆಗೂ ಮಹದಂತರವಿದೆ. ಪ್ರಾಚೀನ ನಗರ ರಾಜ್ಯ ಹಾಗೂ ಸಂಘ, ಗಣಗಳಲ್ಲಿ ಪ್ರಜಾಸತ್ತೆಯೆಂದರೆ ಪ್ರಜೆಗಳು ನೇರವಾಗಿ ಭಾಗವಹಿಸುವ ಸರ್ಕಾರ ಎಂಬಂತೆ ಅನೇಕ ಸಲ ತಿಳಿಯಲಾಗುತ್ತಿತ್ತು. ಆಗ ಗ್ರಾಮ, ನಗರ, ಮುಂತಾದ ಘಟಕಗಳು ಚಿಕ್ಕವಿದ್ದು ಸೀಮಿತ ಜನಸಂಖ್ಯೆಯುಳ್ಳವಾಗಿರುತ್ತಿದ್ದುದರಿಂದ, ಆಗಿನ ಸಮಸ್ಯೆಗಳೂ ಕೆಲವೇ ಇರುತ್ತಿದ್ದುದರಿಂದ ವಯಸ್ಕ ನಾಗರಿಕರು ಪ್ರತ್ಯಕ್ಷವಾಗಿ ಸಭೆ, ಸರ್ಕಾರಗಳಲ್ಲಿ ಸೇರಿ ನಿರ್ಣಯ ತೆಗೆದುಕೊಳ್ಳುವುದು ಸಾಧ್ಯವಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ಸಹಜವಾಗಿ ಚುನಾವಣೆಗೆ ಅನುಷಂಗಿಕ ಮಹತ್ತ್ವವಿರುತ್ತಿತ್ತು. ಇಂದಿನ ಪರಿಸ್ಥಿತಿ ಬೇರೆ. ಇಂದು ವಿಶಾಲ ಕ್ಷೇತ್ರ. ದೊಡ್ಡ ಜನಸಂಖ್ಯೆ. ವಿಪುಲ ಮತ್ತು ಜಟಿಲ ಸಮಸ್ಯೆಗಳುಳ್ಳ ದೇಶ ರಾಜ್ಯಗಳು (ಕಂಟ್ರಿ ಸ್ಟೇಟ್ಸ್) ಇರುವುದರಿಂದ ನಿರ್ಣಯಗಳಿಗಾಗಿ ಜನರೆಲ್ಲ ಒಂದೆಡೆ ಸೇರುವುದಾಗಲಿ, ಜಟಿಲ ಸಮಸ್ಯೆಗಳ ವಿಚಾರಕ್ಕೆ ಅಗತ್ಯವಾದ ಶಿಕ್ಷಣವನ್ನೂ ವಿಶಿಷ್ಟಜ್ಞಾನವನ್ನು ಅನುಭವಗಳನ್ನೂ ಜನಸಾಮಾನ್ಯರಲ್ಲಿ ನಿರೀಕ್ಷಿಸುವುದಾಗಲಿ ವ್ಯವಹಾರ್ಯವಾಗುವುದಿಲ್ಲ. ಇದಕ್ಕೆಂದೇ ಪ್ರಜಾ ನಿರ್ಧಾರ (ರಿಫರೆಂಡಮ್) ಮುಂತಾದ ಉಪಾಯಗಳನ್ನು ಅನೇಕ ಆಧುನಿಕ ಪ್ರಜಾರಾಜ್ಯಗಳಲ್ಲಿ ಸಹ ಕೈಬಿಡಲಾಗಿದೆ. 

	ಆಧುನಿಕ ಅರ್ಥದಲ್ಲಿ ಲೋಕಸತ್ತೆಯೆಂದರೆ ಜನರು ತಾವೇ ಆಡಳಿತದಲ್ಲಿ ಭಾಗವಹಿಸುವುದಿಲ್ಲ. ಆಡಳಿತವನ್ನು ಪರಿಣಾಮಕಾರಿಯಾಗಿ ಹತೋಟಿಯಲ್ಲಿ ಇಟ್ಟುಕೊಳ್ಳುವುದು. ಸಾರ್ವಭೌಮಾಧಿಕಾರ ಪ್ರಜಾನಿಷ್ಟವಾದ್ದೆಂಬ ತತ್ತ್ವವನ್ನು ಒಪ್ಪಿಕೊಂಡಿರುವ ಕಾರಣ ಪ್ರಜರು ಈ ತಮ್ಮ ಅಧಿಕಾರವನ್ನು ಬಳಸುವುದು ಹೇಗೆಂಬುದು ಮುಂದಿನ ವಿಚಾರವಾಗುತ್ತದೆ. ಪ್ರತ್ಯಕ್ಷವಾಗಿ ತಾವೇ ಸರ್ಕಾರದಲ್ಲಿ ಪಾಲುಗೊಳ್ಳುವುದು ಸಾಧ್ಯವಿಲ್ಲವಾದ ಕಾರಣ ತಮ್ಮ ಹತೋಟಿಯಲ್ಲಿ ಇರುವಂಥ ಒಂದು ಸರ್ಕಾರದ ರಚನೆಗಾಗಿ ಜನರು ತಮ್ಮ ಅಧಿಕಾರವನ್ನು ಬಳಸಬೇಕಾಗುತ್ತದೆ. ಅದಕ್ಕಾಗಿ ತಮ್ಮೊಳಗಿನ ಕೆಲವರನ್ನು ನಿರ್ದಿಷ್ಟ ಅವಧಿಗಾಗಿ ಚುನಾಯಿಸಿ ತಮ್ಮ ಮೇಲೆಯೇ ಅಧಿಕಾರ ನಡೆಸುವುದಕ್ಕಾಗಿ, ತಮಗೆ ಅನುಕೂಲವಾಗುವಂತ ನಿರ್ಣಯಗಳನ್ನು ಮಾಡುವುದಕ್ಕಾಗಿ ನೇಮಿಸಿಕೊಳ್ಳಬೇಕಾಗುತ್ತದೆ. ಈ ವ್ಯವಸ್ಥೆಯೇ ಪ್ರಜಾಸತ್ತಾತ್ಮಕ ವ್ಯವಸ್ಥೆ. ಚುನಾವಣೆಗಳ ಮೂಲಕ ಜನ ತಮ್ಮ ಅಭಿಪ್ರಾಯಗಳನ್ನು ಆಯ್ಕೆಯನ್ನೂ ವ್ಯಕ್ತಪಡಿಸುತ್ತಾರೆ. ಈ ಸ್ವಾತಂತ್ರ್ಯ ಜನಸಾಮಾನ್ಯರಲ್ಲಿ ನಿಷ್ಠವಾಗಿರುವುದೆಂಬ ಪ್ರಜ್ಞೆಯೇ ಚುನಾಯಿತ ಪ್ರತಿನಿಧಿಗಳನ್ನು ಜನಾಭಿಪ್ರಯಾದತ್ತ ಎಚ್ಚರಿಕೆಯಿಟ್ಟು ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ. ಅದಕ್ಕೆಂದೇ ಚುನಾವಣೆಗಳಿಗೆ ಅಷ್ಟೊಂದು ಮಹತ್ತ್ವ. ಚುನಾವಣೆಯೆಂದರೆ ಜನ ತಮಗಾಗಿ ತಾವೇ ಮಾತನಾಡುವ ಒಂದು ಮಹಾಘಟನೆ. ಚುನಾವಣೆಗಳು ಆಯತಪ್ಪಿಯಾದರೆ ಪ್ರಜಾಸತ್ತೆ ಸತ್ತುಹೋಗುವುದೆಂದು ಹೇಳುವುದರಲ್ಲಿ ಮಹತ್ತ್ವವಿದೆ.

	ಮತದಾರನ ವೈಯಕ್ತಿಕ ದೃಷ್ಟಿಯಿಂದಲೂ ಚುನಾವಣೆಗೆ ವಿಶೇಷ ಮಹತ್ತ್ವವಿದೆ. ರಾಜಕೀಯ ಅಧಿಕಾರದಲ್ಲಿ ತನ್ನದೊಂದು ಚಿಕ್ಕದಾದರೂ ಪಾಲು ಇದೆ ಎಂಬ ಹೆಮ್ಮೆ ಸಮಾಜದಲ್ಲಿ ತನಗೂ ಒಂದು ಸ್ಥಾನವಿದೆಯೆಂಬ ಭಾವನೆ ಎಂಥ ದಲಿತನಿಗೂ ಇತರರಿಂದ ಕಡೆಗಣಿಸಲ್ಪಟ್ಟವನಿಗೂ ಬದಲು ಇದು ಒಂದು ಸಂದರ್ಭ. ಇದರಿಂದ ಸಾಮಾನ್ಯ ಮನುಷ್ಯನಿಗೂ ಒಂದು ಮಾನಸಿಕ ಸಮಾಧಾನ ಉಂಟಾಗುತ್ತದೆ. ಪ್ರಜಾಸತ್ತಾತ್ಮಕ ಸಮಾನತೆಯಂಥ ಆದರ್ಶಸಾಧನೆಗೆ ಇಂಥ ಮನೋಭಾವ ರೂಪುಗೊಳ್ಳುವುದು ಅಗತ್ಯ.

	ಸರ್ವಾಧಿಕಾರಿ ರಾಷ್ಟ್ರಗಳಲ್ಲೂ ಚುನಾವಣೆಗಳಾಗುವುದಾದರೂ ಅವಕ್ಕೆ ಹೆಚ್ಚಿನ ಮಹತ್ತ್ವವಿರುವುದಿಲ್ಲ. ಅದೊಂದು ಔಪಚಾರಿಕತೆ, ಪೂರ್ವ ನಿಶ್ಚಿತವಾದ ಫಲಿತಾಂಶ ಸುಮಾರಾಗಿ ತಿಳಿದೇ ಇರುತ್ತದೆ. ಜನತೆ ಅನಿವಾರ್ಯವೆಂದು ಚುನಾವಣೆಯಲ್ಲಿ ಭಾಗವಹಿಸುತ್ತದೆ. ಮುಕ್ತಮನಸ್ಸಿನ ಮತ್ತು ನ್ಯಾಯಸಮ್ಮತ ಅಭಿಪ್ರಾಯ ಪ್ರಕಟಣೆಗೆ ಅಲ್ಲಿ ಅವಕಾಶ ಇರುವುದಿಲ್ಲ.

	ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅನೇಕ ವಿಭಾಗಗಳಿವೆ. ರಾಷ್ಟ್ರದ ಜನರು, ಮತದಾರರು, ರಾಜಕೀಯ ಪಕ್ಷಗಳು, ಶಾಸನ ಸಭೆಗಳು ಮತ್ತು ಕಾರ್ಯಾಂಗ. ಈ ಎಲ್ಲ ವಿಭಾಗಗಳ ದೃಷ್ಟಿಯಿಂದಲೂ ಯೋಗ್ಯವೆನಿಸಿದಾಗ ಮಾತ್ರ ಚುನಾವಣೆಗಳು ಯೋಗ್ಯ ಹಾಗೂ ನ್ಯಾಯಸಮ್ಮತವೆಂದು ಹೇಳಬಹುದು. ಆದರೆ ಒಂದು ವಿಭಾಗಕ್ಕೆ ಸೇರಿಕೊಂಡ ಚುನಾವಣಾ ಪದ್ಧತಿ ಇನ್ನೊಂದಕ್ಕೆ ಸರಿಯೆನಿಸದಿರಬಹುದು. ಉದಾಹರಣೆಗೆ ಅನುಪಾತೀಯ ಪ್ರತಿನಿಧಿತ್ವ (ಪ್ರೊಪೋರ್ಷನಲ್ ರೆಪ್ರಸೆಂಟೇಷನ್). ಬಹುಸದಸ್ಯ ಚುನಾವಣಾ ಕ್ಷೇತ್ರಕ್ಕೆ (ಮಲ್ಟಿ-ಮೆಂಬರ್ ಕಾನ್‍ಸ್ಟಿಟ್ಯುಯೆನ್ಸಿಗೆ) ಸಂಬಂಧಿಸಿದಂತೆ ಈ ಚುನಾವಣಾಪದ್ಧತಿ ರಾಜಕೀಯ ಪಕ್ಷಗಳ ದೃಷ್ಟಿಯಿಂದ ಸರಿಕಾಣಬಹುದು. ಏಕೆಂದರೆ ಅವರಲ್ಲಿಯ ಬಹುಜನರಿಗೆ ಶಾಸನಸಭೆಗಳಲ್ಲಿ ಪ್ರಾತಿನಿಧ್ಯ ಸಿಗುವಂತಾಗುತ್ತದೆ. ಆದರೆ ಪಾರ್ಲಿಮೆಂಟರಿ ಮಾದರಿಯ ಸರ್ಕಾರವಿದ್ದಲ್ಲಿ ಕಾರ್ಯಾಂಗದ ದೃಷ್ಟಿಯಿಂದ ಈ ತರದ ಚುನಾವಣೆ ಸರಿಯೆನಿಸದು. ಏಕೆಂದರೆ ಇದು ಅಸ್ಥಿರ ಸಂಮಿಶ್ರ ಸರ್ಕಾರಕ್ಕೆ ದಾರಿ ಮಾಡಿಕೊಡಬಹುದು. ಆದ್ದರಿಂದ ವಿವಿಧ ಚುನಾವಣಾ ಪದ್ಧತಿಗಳ ಗುಣದೋಷಗಳನ್ನು ತೂಗಿ ನೋಡಿ ಒಂದು ದೇಶದ ವಿಶಿಷ್ಟ ಪರಿಸ್ಥಿತಿಗಳಿಗೆ ಹೆಚ್ಚು ಅನುಕೂಲವಾಗಬಲ್ಲಂಥ ಒಂದು ಸಮತೂಕದ ಚುನಾವಣಾ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ.

ಮತಾಧಿಕಾರ

	ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಎಷ್ಟು ಜನರಿಗೆ ಮತಾಧಿಕಾರವಿರುವುದೋ ಅಷ್ಟರಮಟ್ಟಿಗೆ ಚುನಾವಣೆ ನ್ಯಾಯಸಮ್ಮತವೆಂದು ಜನ ಪರಿಗಣಿಸುತ್ತಾರೆ. ಸಾರ್ವತ್ರಿಕ ವಯಸ್ಕ ಮತದಾನದ ಪದ್ಧತಿ ನ್ಯಾಯಸಮ್ಮತ ಚುನಾವಣೆಗೆ ಅಗತ್ಯವೆನ್ನುವುದು ಆದ್ದರಿಂದಲೇ. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಮತಾಧಿಕಾರಕ್ಕೆ ಕನಿಷ್ಠ ವಯೋಮಿತಿ 18-25 ವರ್ಷ. ಭಾರತದ ಸಂವಿಧಾನದ 326ನೆಯ ಅನುಚ್ಛೇದದ ಪ್ರಕಾರ 21 ವರ್ಷಗಳಿಗೆ ಕಡಿಮೆಯಿಲ್ಲದ ವಯಸ್ಸಿನ ಪ್ರತಿಯೊಬ್ಬ ಭಾರತೀಯನಿಗೂ, ಆತ ಇತರ ಯಾವುದೇ ಕಾನೂನಿನ ಪ್ರಕಾರ ಅನರ್ಹವೆನಿಸದಿದ್ದರೆ (ಉದಾ: ಬುದ್ಧಿಭ್ರಮಣೆ, ದುರಾಚಾರ, ಅಕ್ರಮ ವರ್ತನೆ ಇತ್ಯಾದಿ) ಮತದಾರನೆಂದು ಪಟ್ಟಿಯಲ್ಲಿ ಸೇರ್ಪಡೆಯಾಗಲು ಹಕ್ಕು ಇರುತ್ತದೆ.

	ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಭಾರತದಲ್ಲಿದ್ದ ಮತಾಧಿಕಾರಕ್ಕೂ ಈಗಿನ ವಯಸ್ಕ ಮತಾಧಿಕಾರಕ್ಕೂ ಬಹಳಷ್ಟು ಅಂತರವಿದೆ. 1919ರ ಭಾರತ ಸರ್ಕಾರ ಅಧಿನಿಯಮದಲ್ಲಿ ಪ್ರಪ್ರಥಮವಾಗಿ ವಿಧಾನಸಭೆಗಳಿಗೆ ನೇರ ಚುನಾವಣೆಯ ಅವಕಾಶ ಕಲ್ಪಿಸಲಾಯಿತು. ಈ ಅಧಿನಿಯಮದ ಪ್ರಕಾರ ಮತಾಧಿಕಾರ ಆಸ್ತಿವಂತರಿಗೆ ಹಾಗೂ ನಿರ್ದಿಷ್ಟ ತೆರಿಗೆ ಕೊಡುವವರಿಗೆ ಮಾತ್ರ ದೊರೆಯಿತು. ಇಂಥ ಮತದಾರರು ಇಡೀ ದೇಶದಲ್ಲಿ ಕೇವಲ 50 ಲಕ್ಷ-ಒಟ್ಟು ಜನಸಂಖ್ಯೆಯ ಶೇ. 2ರಷ್ಟು ಮತ್ತು ವಯಸ್ಕ ಪುರುಷರ ಶೇ. 9-ಇದ್ದರು. 1935ರ ಅಧಿನಿಯಮ ಮತಾಧಿಕಾರವನ್ನು ಸ್ವಲ್ಪ ಹೆಚ್ಚಿಸಿ ಕನಿಷ್ಠ ಒಂದು ನಿರ್ದಿಷ್ಟ ಮಟ್ಟದ ಶಿಕ್ಷಣ ಪಡೆದವರಿಗೂ ಮತಾಧಿಕಾರ ಕೊಟ್ಟಿತು. ಆಗ ಮತಾಧಿಕಾರ ಪಡೆದಿದ್ದವರ ಸಂಖ್ಯೆ 350 ಲಕ್ಷ. ಇದು ಜನಸಂಖ್ಯೆಯ ಶೇ. 14. ಇದಾದ 15 ವರ್ಷಗಳ ಅನಂತರ ಜಾರಿಗೆ ಬಂದ ಸ್ವತಂತ್ರ ಭಾರತ ಸಂವಿಧಾನದಿಂದ ಸಾರ್ವತ್ರಿಕ ವಯಸ್ಕ ಮತಾಧಿಕಾರ ಜಾರಿಗೆ ಬಂತು.

 	ಪಶ್ಚಿಮದ ಅನೇಕ ದೇಶಗಳಲ್ಲಿ ಸಾರ್ವತ್ರಿಕ ವಯಸ್ಕ ಮತಾಧಿಕಾರ ಪಡೆಯಲು ಜನರು ಹೋರಾಟ ನಡೆಸಬೇಕಾಯಿತು. ಇಂಗ್ಲೆಂಡಿನಲ್ಲಿ 1838ರಲ್ಲೇ ಮತಾಧಿಕಾರದ ವಿಸ್ತರಣೆ ಆರಂಭವಾದರೂ ಅಲ್ಲಿಯ ಹೆಂಗಸರಿಗೆ ಮತದಾನದ ಹಕ್ಕು ದೊರೆತದ್ದು 1928ರಲ್ಲಿ. ಅಮೆರಿಕಾದಲ್ಲಿ ಎಲ್ಲ ಮಾನವರೂ ಸಮಾನರಾಗಿಯೇ ಹುಟ್ಟಿದ್ದಾರೆ ಎಂಬ ಘೋಷಣೆಯನ್ನೊಳಗೊಂಡ ಸ್ವಾತಂತ್ರ್ಯ ಘೋಷಣೆಯಾದ 65 ವರ್ಷಗಳ ಅನಂತರ 1840ರಲ್ಲಿ ಪುರುಷರಿಗೆ ವಯಸ್ಕ ಮತದಾನ ಲಭಿಸಿತು. ಮತ್ತೆ 80 ವರ್ಷಗಳ ಅನಂತರ ಮಹಿಳೆಯರಿಗೆ ಆ ಅಧಿಕಾರ ಸಿಕ್ಕಿತು. ಫ್ರಾನ್ಸಿನಲ್ಲಿ ಕ್ರಾಂತಿಯಾಗಿ ಮಾನವ ಹಕ್ಕುಗಳ ಮಹಾಘೋಷಣೆಯಾದ 85 ವರ್ಷಗಳ ಅನಂತರ, 1875ರಲ್ಲಿ ಪುರುಷ ವಯಸ್ಕ ಮತದಾನದ ಹಕ್ಕು ಲಭಿಸಿತು. ಅಲ್ಲಿ ಮಹಿಳೆಯರಿಗೆ ಮತಾಧಿಕಾರ ಲಭಿಸಿದ್ದು 1944ರಷ್ಟು ಈಚೆಗೆ, ಪುರೋಗಾಮಿ ಪ್ರಜಾಸತ್ತೆಗಳೆನಿಸಿಕೊಳ್ಳುವ ಸ್ವೀಡನ್ನಿನಂಥ ದೇಶಗಳಲ್ಲಿ ಇಂದಿಗೂ ಮಹಿಳೆಯರಿಗೆ ಮತಾಧಿಕಾರವಿಲ್ಲ. ಇತ್ತೀಚೆಗೆ ಸ್ವಾತಂತ್ರ್ಯ ಪಡೆದ ಅನೇಕ ಏಷ್ಯನ್ ಮತ್ತು ಆಫ್ರಿಕನ್ ದೇಶಗಳಲ್ಲಿ ಯಾವ ಹೋರಾಟವೂ ಇಲ್ಲದೆ ಒಮ್ಮೆಲೇ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು ದೊರೆತದ್ದು ಗಮನಾರ್ಹವಾದ ಸಂಗತಿ. ಆದರೆ ಕೆಲವು ಜನ ಸಮರ್ಥ ನಿರೀಕ್ಷಕರ ಅಭಿಪ್ರಾಯವೇನೆಂದರೆ ನಿಧಾನವಾಗಿ, ಹಂತಹಂತವಾಗಿ, ಹೋರಾಟದ ಮೂಲಕ ಮತಾಧಿಕಾರ ಪಡೆದ ಕ್ರಮ ಹೆಚ್ಚು ಒಳ್ಳೆಯದಾಗಿ ಕಾಣುತ್ತದೆ. ಏಕೆಂದರೆ ಜನರಲ್ಲಿ ಮತದ ಮೌಲ್ಯದ ಪರಿಜ್ಞಾನ ಚೆನ್ನಾಗಿ ಉಂಟಾಗಿ ಪ್ರಜಾಸತ್ತಾತ್ಮಕ ಸಂಸ್ಥೆಗಳ ಸ್ಥಿರತೆಗೆ ಅದು ಸಹಾಯಕವಾಗಿರುತ್ತದೆ.

	ಮತದಾನಕ್ಕೆ ಯೋಗ್ಯತೆಯನ್ನು ಅಲೆಯುವುದಕ್ಕಾಗಿ ಆಸ್ತಿ. ತೆರಿಗೆ ಕೊಡುವುದು, ಲಿಂಗ ಜಾತಿ, ಶಿಕ್ಷಣಮಟ್ಟ, ವಯಸ್ಸು ಇತ್ಯಾದಿಗಳನ್ನು ಅಳತೆಗೋಲನ್ನಾಗಿ ಭಾವಿಸಬೇಕೆಂದು ವಾದಿಸುವವರು ಈಗಲೂ ಇಲ್ಲದಿಲ್ಲ. ವಿಚಿತ್ರವಾದ ಮಾತೆಂದರೆ, ನಾಗರಿಕ ನಿತ್ಯ ವ್ಯವಹರಿಸುವ ವಿಚಾರಗಳಲ್ಲಿ, ಎಂದರೆ ತನಗಾಗಿ ವಕೀಲನನ್ನೊ, ವೈದ್ಯನನ್ನೊ, ಶಿಕ್ಷಕನನ್ನೊ, ಯಂತ್ರವನ್ನೊ ಆರಿಸಿಕೊಳ್ಳುವಲ್ಲಿ, ಆತನ ಯೋಗ್ಯತೆ ಬಗ್ಗೆ ಯಾರೂ ಪ್ರಶ್ನಿಸುವುದಿಲ್ಲ. ಸಾಮಾನ್ಯವಾಗಿ ಒಳ್ಳೆಯ ಹೆಸರು ಗಳಿಸಿದವನನ್ನು ಅಥವಾ ಒಳ್ಳೆಯ ಯಂತ್ರವನ್ನು ಅವನು ಆರಿಸಿಕೊಳ್ಳುತ್ತಾನೆ. ಅವಶ್ಯವೆನಿಸಿದರೆ ಸ್ನೇಹಿತರ ಸಲಹೆ ಪಡೆಯುತ್ತಾನೆ. ತನ್ನ ವಿಧಾನಸಭಾ ಪ್ರತಿನಿಧಿಯನ್ನು ಆರಿಸುವ ಸಮಸ್ಯೆ ಇಂಥ ಆಯ್ಕೆಗಿಂತ ಹೆಚ್ಚು ಜಟಿಲವಾದ್ದೇನೂ ಅಲ್ಲ. ಇತರ ಕ್ಷೇತ್ರಗಳಂತೆ ಇಲ್ಲೂ ಅವನು ಉಮೇದುವಾರನ ಯೋಗ್ಯತೆಯ ಮೇಲಿಂದ, ಅವನ ಕೃತಿಗಳ ಪರಿಣಾಮಗಳ ಮೇಲಿಂದ ನಿರ್ಣಯಕ್ಕೆ ಬರುತ್ತಾನೆ. ಆದ ಕಾರಣ ಚುನಾವಣೆಗಾಗಿಯೇ ನಾಗರಿಕನಿಗೆ ಪ್ರತ್ಯೇಕ ಯೋಗ್ಯತೆ ಇರಬೇಕೆಂಬ ವಾದದಲ್ಲಿ ವಿಶೇಷ ಅರ್ಥವಿಲ್ಲ. ವಿಶಿಷ್ಟ ಶಿಕ್ಷಣ, ಆಸ್ತಿ ಇತ್ಯಾದಿಗಳನ್ನು ಹೊಂದಿದವರಿಂದ ರಾಜಕೀಯ ನಿರ್ಣಯಗಳ ಮೇಲೆ ಗಮನಾರ್ಹವಾದ ಪರಿಣಾಮವಾಗಿದೆಯೆಂಬುದು ಅಮೆರಿಕ, ಇಂಗ್ಲೆಂಡ್‍ಗಳಲ್ಲಿ ನಡೆದ ಮತದಾನ ವರ್ತನೆಗಳ ಅಧ್ಯಯನದಿಂದಲೂ ಕಂಡುಬಂದಿಲ್ಲ. ಅಲ್ಲದೆ ಮತದಾರನಿಗೆ ಇರಬೇಕಾದ ಯೋಗ್ಯತೆಯೇನೆಂಬುದನ್ನು ನಿರ್ಧರಿಸುವುದೂ ಅಸಾಧ್ಯವೇ.

	ಚುನಾವಣೆ ಪ್ರಧಾನವಾಗಿ ಮಹತ್ತ್ವದ ಪ್ರಶ್ನೆಗಳಿಗೆ ಸಂಬಂಧಿಸಿರುವುದರಿಂದ ಆ ಪ್ರಶ್ನೆಗಳನ್ನು ಮತದಾರ ಅರ್ಥ ಮಾಡಿಕೊಳ್ಳಬಲ್ಲನಾಗಿರಬೇಕೆಂಬ ತತ್ತ್ವದ ಮೇಲೆ ಇಂಥ ವಾದ ಮಂಡಿಸಲಾಗುತ್ತದೆ. ಆದರೆ ಇದು ಒಂದು ಭ್ರಮೆ. ರಾಜಕೀಯ ಪಕ್ಷಗಳು ತಮ್ಮ ಧ್ಯೇಯ ಧೋರಣೆಗಳ ಘೋಷಣಾಪತ್ರಗಳನ್ನು ಪ್ರಕಟಿಸುವುವಾದರು ಅವಕ್ಕೆ ಚುನಾವಣೆಗಳಲ್ಲಿ ಹಾಗೂ ಅನಂತರ ಕೇವಲ ಅನುಷಂಗಿಕ ಮಹತ್ತ್ವವಿರುವುದೂ ಎಲ್ಲರಿಗೂ ತಿಳಿದ ವಿಚಾರ. ಮತದಾರ ಚುನಾವಣೆಯಲ್ಲಿ ಪ್ರಧಾನವಾಗಿ ಮತ ಹಾಕುವುದು ವ್ಯಕ್ತಿಗಾಗಿ ಅಥವಾ ಪಕ್ಷಕ್ಕಾಗಿ. ಧೋರಣೆಯ ಪ್ರಶ್ನೆಗಳಿಗಾಗಿ ಅಲ್ಲ. ಮತದಾರರ ಪೈಕಿ ಬಹಳ ಮಂದಿಗೆ ಪಕ್ಷಗಳ ಧ್ಯೇಯ ಮತ್ತು ಕಾರ್ಯಕ್ರಮಗಳ ಪರಿಜ್ಞಾನವೇ ಇರುವುದಿಲ್ಲವೆಂಬುದು ಮುಂದುವರಿದ ಮತ್ತು ಸುಶಿಕ್ಷಿತ ಮತದಾರರಿಂದ ದೇಶಗಳಲ್ಲಿ ನಡೆಸಿದ ಅಧ್ಯಯನಗಳಿಂದ ತಿಳಿದು ಬಂದಿದೆ. ಪಕ್ಷಗಳು ಅಸ್ಪಷ್ಟವಾಗಿ ಹೇಳುವ ಅನೇಕ ವಿಷಯಗಳ ತಿಳಿವಳಿಕೆ ಮತದಾರನಿಗೆ ಇರುವುದೂ ಶಕ್ಯವಿಲ್ಲ. ತನಗೇ ನೇರವಾಗಿ ಸಂಬಂಧಿಸುವ ಯುದ್ಧ ಅಥವಾ ಅರ್ಥವ್ಯವಸ್ಥೆಯಂಥ ಕೇಂದ್ರ ಸಮಸ್ಯೆಯ ಬಗ್ಗೆ ಖಚಿತ ಮತವನ್ನು ಕೇಳಿದರೆ ಹೇಳಬಹುದು. ಇತರ ಅನೇಕ ಸಮಸ್ಯೆಗಳ ಬಗ್ಗೆ ಮತದಾರ ಮತಕೊಡುವುದಾದರೆ ಪ್ರಜಾಪ್ರಭುತ್ವ ನಡೆಯುವುದೇ ಕಷ್ಟವಾದೀತು. ಆದಕಾರಣ ಸಾಮಾನ್ಯವಾಗಿ ಮತದಾನವಾಗುವುದು ವ್ಯಕ್ತಿಗೆ, ಪಕ್ಷಕ್ಕೆ, ಶ್ರೀಮಂತರ ಅಥವಾ ಬುದ್ಧಿಜೀವಿಗಳ ಸರ್ಕಾರ ಬೇಕೆನ್ನುವವರ ಮತ್ತು ಪ್ರಜಾಪ್ರಭುತ್ವವಾದಿಗಳ ನಡುವೆ ಈ ವಿವಾದ ಇನ್ನೂ ನಡೆದೇ ಇದೆ. ಭಾರತದಲ್ಲೂ ವಯಸ್ಕ ಮತದಾನ ಒಂದು ಶಾಪವಾಯಿತೆಂದು ಮರುಗುವವರು ಇದ್ದಾರೆ. ಇವರ ಉದ್ವಿಗ್ನತೆಗೆ ಕಾರಣವಿಲ್ಲದೆ ಇಲ್ಲ. ಅಶಿಕ್ಷಿತರಿರುವ ಹಾಗೂ ಹಿಂದುಳಿದ ದೇಶಗಳಲ್ಲಿ ಸಾರ್ವತ್ರಿಕ ಮತದಾನ ನಿಷ್ಪ್ರಯೋಜಕ. ಏಕೆಂದರೆ ಅಲ್ಲಿ ಮತಗಳನ್ನು ಮಾರಲಾಗುತ್ತದೆ. ಮತಗಳನ್ನು ಖರೀದಿ ಮಾಡಬಲ್ಲಂಥ ಕೆಲವರೇ ಅಧಿಕಾರಕ್ಕೆ ಬರುತ್ತಾರೆ. ಅಲ್ಲದೆ, ಸಮಾಜಶಾಸ್ತ್ರದ ಪ್ರಕಾರ, ಎಲ್ಲ ಸಂಸ್ಥೆಗಳಲ್ಲೂ ಒಂದು ಬಗೆಯ ಅಲ್ಪ ಜನಾಧಿಪತ್ಯ ಕೆಲಸ ಮಾಡುತ್ತಿರುತ್ತದೆ. ಹಣ, ಜಾತಿ, ಭಾಷೆ, ಪಕ್ಷಗಳಂಥವುಗಳ ನೆರವಿನಿಂದ ಕೆಲವೇ ಜನರೇ ಯಾವಾಗಲೂ ಅಧಿಕಾರಸ್ಥಾನದಲ್ಲಿ ಇರುತ್ತಾರೆ. ಇಂಥವರ ಮೇಲೆ ಜನಸಮೂಹದ ನಿಯಂತ್ರಣ ಎಂದೂ ಶಕ್ಯವಾಗುವುದಿಲ್ಲ. ರಾಜಕೀಯ ಅಧಿಕಾರ ಆರ್ಥಿಕ ಅಧಿಕಾರದ ಕೈಗೊಂಬೆಯಾಗಿರುವುದರಿಂದ ರಾಜ್ಯದ ಅರ್ಥವ್ಯವಸ್ಥೆಯಲ್ಲಿ ನಿಯಂತ್ರಕ ಸಾಮಥ್ರ್ಯ ಪಡೆದವರೇ ರಾಜಕೀಯ ಅಧಿಕಾರವನ್ನು ಒಂದಿಲ್ಲೊಂದು ರೀತಿಯಲ್ಲಿ ಚಲಾಯಿಸುವರೆಂಬುದು ಮಾಕ್ರ್ಸ್‍ವಾದಿಗಳ ವಿಚಾರ, ಸಾರ್ವತ್ರಿಕ ವಯಸ್ಕ ಮತದಾನದಿಂದ ಪರಿಸ್ಥಿತಿಯಲ್ಲಿ ವಿಶೇಷ ಮಾರ್ಪಾಡು ಬರಲಾರದೆಂಬುದು ಈ ಎಲ್ಲ ವಾದಗಳ ನಿರ್ಣಯ.

	ಆದರೆ ಮತಾಧಿಕಾರಿಗಳ ವ್ಯಾಪ್ತಿಯನ್ನು ವಿಸ್ತರಿಸಿದ್ದರಿಂದ ಪೊಲೀಸ್‍ರಾಜ್ಯ ಹೋಗಿ ಕಲ್ಯಾಣರಾಜ್ಯ ಬರುವ ಭರವಸೆಯುಂಟಾದ್ದನ್ನೂ ಅಲ್ಪಜನಾಧಿಪತ್ಯ ಬಂದರೂ ಒಂದೇ ಗುಂಪಿನ ಆಳ್ವಿಕೆ ಶಾಶ್ವತವಾಗದೆ ಚುನಾವಣೆಗಳ ಮೂಲಕ ಬದಲಾಗುವ ಸಾಧ್ಯತೆ ಇರುವುದನ್ನೂ ಪೈಪೋಟಿ ನಡೆಸುವ ಪಕ್ಷಗಳಿರುವುದರಿಂದ ಜನನಿಯಂತ್ರಣ ಹೆಚ್ಚು ಸಫಲವಾಗುವ ಸಂಭಾವ್ಯತೆಯನ್ನೂ ಜನರ ನಡುವೆ ವರ್ಗಭೇದವಿರದ ಹಾಗೆ ಚುನಾವಣೆ ಸಮಾನತಾ ತತ್ತ್ವವನ್ನು ತಂದದ್ದನ್ನೂ ಮರೆಯುವ ಹಾಗಿಲ್ಲ. ಜನರು ಮತದಾನ ಮಾಡದಿರುವುದರಿಂದ ಕೆಲವು ಸಲ ನಿರಾಶೆಯಾಗುವುದಾದರೂ ಮತಾಧಿಕಾರವನ್ನು ಜನ ಕಾಪಾಡಿಕೊಂಡು ಹೋಗುವುದೇ ಪ್ರಜಾಪ್ರಭುತ್ವದ ಯಶಸ್ಸಿನ ಭರವಸೆಯಾಗಿದೆ. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಮುಂದೊಡ್ಡಿದ ಒಂದು ಸಮಸ್ಯೆಯೆಂದರೆ, ಕೋಟಿಗಟ್ಟಲೆ ಮತದಾರರನ್ನು ಸಂಘಟಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ತಿಳುವಳಿಕೆಗಳನ್ನು ಒದಗಿಸುವ ಕೆಲಸ. ಚುನಾವಣೆಗೆ ತಗಲುವ ಭಾರಿ ವೆಚ್ಚದ್ದು ಇನ್ನೊಂದು ಸಮಸ್ಯೆ. ಇವು ಸಾಮಾನ್ಯ ಮನುಷ್ಯನ ಹಿಡಿತಕ್ಕೆ ನಿಲುಕಲಾರವಾದ್ದರಿಂದ ಪಕ್ಷಗಳ ಅಗತ್ಯ ಉಂಟಾಗಿವೆ. ಈ ಪಕ್ಷಗಳು ಧನಸಂಗ್ರಹ ಮಾಡುವ ರೀತಿಯಿಂದಾಗಿ ಪ್ರಜಾಪ್ರಭುತ್ವಕ್ಕೆ ಮಾರಕವಾಗುವಂಥ ಸೂತ್ರಚಾಲಕ ಶಕ್ತಿ ವಿಶಿಷ್ಟ ಹಿತಾಸಕ್ತಿಗಳಿಗೆ ಲಭಿಸುವ ಅಪಾಯವಿದೆ. ಸಾರ್ವತ್ರಿಕ ವಯಸ್ಕ ಮತಾಧಿಕಾರ ಅಪೇಕ್ಷಣೀಯ, ಯೋಗ್ಯ ಮತ್ತು ಅನಿವಾರ್ಯವಾದರು ಅದರೊಂದಿಗೆ ಬೆರೆತು ಬಂದ ಈ ಅಪಾಯಗಳನ್ನು ದೂರ ಮಾಡುವ ಉಪಾಯವನ್ನು ಹುಡುಕಬೇಕಾಗಿದೆ.

	ಮತದಾರರು ಮತ್ತು ಚುನಾವಣಾ ಕ್ಷೇತ್ರಗಳು : ನಾಗರಿಕರ ರಾಜಕೀಯ ಸಮಾನತಾ ತತ್ತ್ವದ ಅಭಿವ್ಯಕ್ತಿಗೆ ಸಾರ್ವತ್ರಿಕ ಮತದಾನ ಕೇವಲ ಒಂದು ಸಾಧನ. ಅದು ಅರ್ಥಪೂರ್ಣವಾಗಬೇಕಾದರೆ ಅಷ್ಟೇ ಮಹತ್ತ್ವದ ಇತರ ಮಾರ್ಗಗಳೂ ಇವೆ. ಎಲ್ಲ ವಯಸ್ಕರಿಗೆ ಮತಾಧಿಕಾರ ಕೊಟ್ಟರೆ ಸಾಲದು. ಈ ಮತಕ್ಕೆ ಸಮಾನ ಮೌಲ್ಯ ಇರಬೇಕಾಗುತ್ತದೆ. ಒಬ್ಬ ಮತದಾರನಿಗೆ ಒಂದು ಮತದ ಅಧಿಕಾರ ಇದ್ದರೆ ಮಾತ್ರ ಇದು ಸಾಧ್ಯ. ಯಾವ ಕಾರಣಕ್ಕಾಗಿಯಾದರೂ ಹಲವರಿಗೆ ಅನೇಕ ಮತಾಧಿಕಾರ (19ನೆಯ ಶತಮಾನದಲ್ಲಿ ಹಾಗೆ ಹೇಳುವವರಿದ್ದರು) ಕೊಟ್ಟರೆ ಪ್ರಜಾಸತ್ತಾತ್ಮಕ ಸಮಾನತೆ ಹಾಗೂ ಸಾರ್ವತ್ರಿಕ ಮತದಾನ ತತ್ತ್ವಗಳಿಗೆ ಭಂಗ ಬರುತ್ತದೆ. ಇಂದು ಮುಂದುವರಿದ ರಾಷ್ಟ್ರಗಳಲ್ಲಿ ಎಲ್ಲೂ ಈ ಪದ್ಧತಿ ಉಳಿದಿಲ್ಲ. ಪ್ರಜಾಪ್ರಭುತ್ವ ಶೈಶಾವಸ್ಥೆಯಲ್ಲಿ ಇರುವಂಥ ಕೀನ್ಯದಂಥ ರಾಷ್ಟ್ರದಲ್ಲಿ ಈಗಲೂ ಆಸ್ತಿ, ವರಮಾನ, ಶಿಕ್ಷಣ, ವಯಸ್ಸಿನಲ್ಲಿ ಹಿರಿಯತನ ಮುಂತಾದ ಯೋಗ್ಯತೆಗಳನ್ನು ಗಮನಿಸಿ ಒಬ್ಬೊಬ್ಬನಿಗೂ ಒಂದು, ಎರಡು, ಮೂರು ಅಥವಾ ಇನ್ನೂ ಹೆಚ್ಚು ಮತಗಳ ಅಧಿಕಾರ ಕೊಡುವ ಪದ್ಧತಿ ಇದೆ.

	ಭಾರತದಲ್ಲಿ ವಿಧಾನಸಭೆ, ಲೋಕಸಭೆಗಳ ಚುನಾವಣೆಗಳಲ್ಲಿ ಅನೇಕ ಮತದಾನ ಪದ್ಧತಿ ಬಳಕೆಯಲ್ಲಿ ಇಲ್ಲ. ಆದರೆ ರಾಜ್ಯಗಳ ವಿಧಾನಪರಿಷತ್ತುಗಳ ಚುನಾವಣೆಯಲ್ಲಿ ಅನೇಕ ಮತದಾನ ಪದ್ಧತಿ ಕಂಡುಬರುತ್ತದೆ. ಅನೇಕ ಮತಾಧಿಕಾರವಿಲ್ಲದಿದ್ದರೂ ಆಸ್ತಿ. ಶಿಕ್ಷಣ ಇತ್ಯಾದಿಗಳಿರುವ ಜನರು ಚುನಾವಣೆಗಳಲ್ಲಿ ಇತರರಿಗಿಂತ ಹೆಚ್ಚು ಪ್ರಭಾವ ಬೀರುವರೆಂಬುದನ್ನು ಗಮನಿಸಿದಾಗ ಶಾಸನಬದ್ಧವಾಗಿ ಅನೇಕ ಮತಾಧಿಕಾರ ನೀಡುವುದು ಅನಗತ್ಯವಾಗುತ್ತದೆ.

	ಮತದಾರರ ಮತಕ್ಕೆ ಸಾಮಾನ್ಯ ಮೌಲ್ಯ ಬರಲು ಇರಬೇಕಾದ ಇನ್ನೊಂದು ಅಗತ್ಯವೆಂದರೆ ಸಮಾನ ವ್ಯಾಪ್ತಿಯ ಚುನಾವಣಾಕ್ಷೇತ್ರ. ಸುಮಾರಾಗಿ ಸಮಾನಸಂಖ್ಯೆಯ ಮತದಾರರಿರುವ ಕ್ಷೇತ್ರಗಳಿದ್ದರೆ ಅವುಗಳಿಂದ ಆಯ್ಕೆಯಾದ ಉಮೇದುವಾರರಿಗೆ ಬೀಳುವ ಮತಗಳ ಬೆಲೆ ಸಮಾನವಾಗಿರುತ್ತದೆ. ಚುನಾವಣಾ ಕ್ಷೇತ್ರಗಳಲ್ಲಿ ಅಸಮಾನತೆಯಿದ್ದರೆ ನೀಡಲಾದ ಮತಗಳ ಶೇಕಡವಾರು ಗಣನೆಯಲ್ಲೂ ಅವುಗಳ ಬೆಲೆಯಲ್ಲೂ ವ್ಯತ್ಯಾಸವುಂಟಾಗುತ್ತದೆ. ಇದು ಮತದಾರ, ಉಮೇದುವಾರ-ಇಬ್ಬರ ದೃಷ್ಟಿಯಿಂದಲೂ ಅಸಾಧುವಾದ್ದು. ಆದ್ದರಿಂದ ಜನಸಂಖ್ಯೆಯ ದೃಷ್ಟಿಯಿಂದ ಚುನಾವಣಾ ಕ್ಷೇತ್ರಗಳು ಸಮಾನವಾಗಿರಬೇಕು. ಭಾರತ ಸಂವಿಧಾನದ 8(2)ನೆಯ ಅನುಚ್ಛೇದದಲ್ಲಿ ಈ ತತ್ತ್ವವನ್ನು ಒಪ್ಪಿಕೊಳ್ಳಲಾಗಿದೆ. ಲೋಕಸಭೆಯ ಸ್ಥಾನಗಳನ್ನು ರಾಜ್ಯಗಳಿಗೆ ಹಂಚುವಾಗ ಸಾಧ್ಯವಾದ ಮಟ್ಟಿಗೆ ಎಲ್ಲ ರಾಜ್ಯಗಳಿಗೂ ಅವುಗಳ ಜನಸಂಖ್ಯೆಗಳಿಗೆ ಅನುಗುಣವಾಗಿ ಸ್ಥಾನಗಳನ್ನು ಹಂಚುವುದಲ್ಲದೆ, ರಾಜ್ಯಗಳಲ್ಲೂ ಪ್ರಾದೇಶಿಕ ಚುನಾವಣಾಕ್ಷೇತ್ರಗಳ ರಚನೆಯಲ್ಲೂ ಜನಸಂಖ್ಯಾ ಸಮಾನತೆಯನ್ನು ಅನುಸರಿಸಲಾಗುತ್ತದೆ. ವಿಧಾನಸಭೆಗಳಿಗೆ ಸಂಬಂಧಿಸಿದಂತೆಯೂ ಸಂವಿಧಾನದ 170(2)ನೆಯ ಅನುಚ್ಛೇದದ ಪ್ರಕಾರ ಇದೇ ತತ್ತ್ವವನ್ನೇ ಅನುಸರಿಸಬೇಕಾಗುತ್ತದೆ.

	ಈ ತತ್ತ್ವಪಾಲನೆಗಾಗಿ ಭಾರತದಲ್ಲಿ 1961ರಲ್ಲಿ ದ್ವಿಸದಸ್ಯತ್ವ ರದ್ದು ಮಾಡುವ ಅಧಿನಿಯಮ ಬಂದದ್ದರಿಂದ ಈಗ ಎಲ್ಲ ಚುನಾವಣಾ ಕ್ಷೇತ್ರಗಳೂ ಏಕಸದಸ್ಯ ಕ್ಷೇತ್ರಗಳಾಗಿವೆ. ಆದರೂ ಸಮಾನ ಚುನಾವಣಾಕ್ಷೇತ್ರಗಳೂ ರೂಪಿಸುವುದು ಇನ್ನೂ ಪೂರ್ಣ ಸಾಧಿಸಿಲ್ಲ. ಉದಾಹರಣೆಗೆ ಹಿಮಾಚಲ ಪ್ರದೇಶದ ಒಂದು ಕ್ಷೇತ್ರದಲ್ಲಿ 2 ಲಕ್ಷಕ್ಕೂ ಕಡಿಮೆ ಮತದಾರರು, ಇನ್ನೊಂದರಲ್ಲಿ 5 ಲಕ್ಷಕ್ಕಿಂತ ಹೆಚ್ಚು ಮತದಾರರು ಇರುವುದುಂಟು. ಈ ಪರಿಸ್ಥಿತಿ ಇತರ ದೇಶಗಳಲ್ಲೂ ಕಂಡುಬರುತ್ತದೆ. ಚುನಾವಣಾ ಕ್ಷೇತ್ರದ ಸೀಮಾ ನಿರ್ಧಾರದಲ್ಲಿ (ಡೀಲಿಮಿಟೇಷನ್) ಪರಿಗಣಿಸಬೇಕಾದ ಹಲವಾರು ಅಂಶಗಳಿವೆ: 1 ಆಡಳಿತಾನುಕೂಲ, 2 ಆಡಳಿತ ಘಟಕವಾದಂಥ ತಾಲ್ಲೂಕುಗಳಿಗೆ ಅದನ್ನು ಸೀಮಿತಗೊಳಿಸುವ ಅಗತ್ಯ. 3. ನೈಸರ್ಗಿಕ ಗಡಿಯನ್ನು ಗಮನಿಸಬೇಕಾದ ಅನಿವಾರ್ಯತೆ, 4. ಗ್ರಾಮ ಹಾಗೂ ನಗರವಾಸಿ ಮತದಾರರ ವಿಭಿನ್ನ ಆಸಕ್ತಿಗಳು ಮತ್ತು ಧೋರಣೆಗಳು. ಇಂಥ ಕಾರಣಗಳಿಂದಾಗಿ ಕ್ಷೇತ್ರಗಳಲ್ಲಿ ಸಮಾನತೆ ತರುವುದು ಶಕ್ಯವಾಗುವುದಿಲ್ಲ. ಅಲ್ಪಸಂಖ್ಯಾತರ ಸೌಲಭ್ಯಕ್ಕಾಗಿ ಇಡೀ ಜನಸಂಖ್ಯೆಯ ದೃಷ್ಟಿಯಿಂದ ಸಮರ್ಥನೀಯವಲ್ಲದಿದ್ದರೂ. ಮೀಸಲು ಕ್ಷೇತ್ರಗಳನ್ನು ನಿರ್ಮಿಸಿದಾಗ ಕೂಡ ಚುನಾವಣಾ ಕ್ಷೇತ್ರ ರಚನೆಯಲ್ಲೂ ಈ ಬಗೆಯ ವ್ಯತ್ಯಾಸ ಸಂಭವಿಸುತ್ತದೆ. ಒಟ್ಟಿನಲ್ಲಿ ಅಕ್ಷರಶಃ ಸಮಾನ ವಿಸ್ತೀರ್ಣದ ಕ್ಷೇತ್ರಗಳ ರಚನೆ ಸಾಧ್ಯವೂ ಇಲ್ಲ, ಅಪೇಕ್ಷಣೀಯವೂ ಅಲ್ಲ. ತತ್ತ್ವವನ್ನು ಸಾಮಾನ್ಯವಾಗಿ ಒಪ್ಪಿ ಅದನ್ನು ಕಾರ್ಯರೂಪಕ್ಕೆ ತಂದಾಗ ಸಂಭವಿಸುವ ವ್ಯತ್ಯಾಸ ಸಮರ್ಥನೀಯವಾಗಿರಬೇಕು. ಅಕ್ಕಪಕ್ಕದ ಮತಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳ ಪರ ವಿರೋಧಿ ಮತದಾರರ ಗುಂಪುಗಳಿರುವ ವಿಭಾಗಗಳನ್ನರಿತು ಯಾವುದೋ ಒಂದು ಪಕ್ಷಕ್ಕೆ ಅನುಕೂಲವಾಗುವ ಹಾಗೆ ದುರುದ್ದೇಶದಿಂದ ಆ ವಿಭಾಗಗಳನ್ನು ವಿಚ್ಛೇದಿಸಿಯೋ ಬೇರೆ ರೀತಿಯಲ್ಲಿ ಜೋಡಿಸಿಯೋ ಚುನಾವಣಾಕ್ಷೇತ್ರ ರಚಿಸುವುದು ಅಪ್ರಾಮಾಣಿಕವಾದ ಮತ್ತು ಅಪಾಯಕರವಾದ ಕ್ರಮ. ಆದ್ದರಿಂದ ಚುನಾವಣಾಕ್ಷೇತ್ರ ಸೀಮಾ ನಿರ್ಧಾರಣ ಆಯೋಗ ಪಕ್ಷಾತೀತವಾಗಿರುವುದು ಅಗತ್ಯ. ಜನಸಂಖ್ಯೆಯ ವ್ಯತ್ಯಾಸ ಮತ್ತು ಚಲನೆಗಳಿಗೆ ಅನುಗುಣವಾಗಿ ಆಗಾಗ ಮತಕ್ಷೇತ್ರಗಳ ಪರಿಷ್ಕರಣವಾಗಬೇಕೆಂದೂ ಜನಸಂಖ್ಯೆಗೆ ಅನುಗುಣವಾಗಿ, ಸ್ವೀಕೃತ ತತ್ತ್ವದ ಆಧಾರದ ಮೇಲೆ, ಕ್ಷೇತ್ರಗಳ ಸೀಮಾನಿರ್ಧಾರಣವಾಗಬೇಕೆಂದೂ ಸಂವಿಧಾನದಲ್ಲಿ ವಿಧಿಸಲಾಗಿದೆ.

	ಏಕಸದಸ್ಯ ಮತ್ತು ಅನೇಕ ಸದಸ್ಯ ಕ್ಷೇತ್ರಗಳು : ಭಾರತದಲ್ಲಿ ಅನೇಕ ಸದಸ್ಯ ಚುನಾವಣಾ ಕ್ಷೇತ್ರಗಳನ್ನು 1961ರಲ್ಲಿ ರದ್ದು ಪಡಿಸಲಾಯಿತು. ಅನೇಕ ಸದಸ್ಯ ಕ್ಷೇತ್ರ ಬೇಕೆನ್ನುವವರ ವಾದ ಹೀಗಿದೆ; 1. ಅನುಪಾತೀಯ ಪ್ರತಿನಿಧಿತ್ವವನ್ನು ದೊರಕಿಸುವುದು ಅನೇಕ ಸದಸ್ಯ ಕ್ಷೇತ್ರದಲ್ಲಿಯೇ ಶಕ್ಯ. 2. ಅನೇಕ ಸದಸ್ಯ ಕ್ಷೇತ್ರದಲ್ಲಿ ನಿಲ್ಲುವ ಉಮೇದುವಾರ ಹೆಚ್ಚು ಜನಪ್ರಿಯ ಹಾಗೂ ಸಮರ್ಥನಿರಬೇಕಾಗುತ್ತದೆ. ಏಕೆಂದರೆ ಕ್ಷೇತ್ರದ ವಿಸ್ತಾರ ಹೆಚ್ಚಾಗಿರುವುದರಿಂದ ಪೈಪೋಟಿಯೂ ಹೆಚ್ಚಾಗಿರುತ್ತದೆ. ಚಿಕ್ಕ ಕ್ಷೇತ್ರ ಚಿಕ್ಕ ಪ್ರತಿನಿಧಿಯನ್ನೇ ಹುಟ್ಟಿಸುವುದೆಂಬುದು ಫ್ರಾನ್ಸಿನ ಒಂದು ಜನನುಡಿ. 3 ವಿಸ್ತಾರಕ್ಷೇತ್ರದ ಮತದಾರರ ದೃಷ್ಟಿಕೋನವೂ ವಿಶಾಲವಾದ್ದಾಗಿ ಸ್ಥಾನಿಕ, ಸಂಕುಚಿತ ಆಸಕ್ತಿಗಳ ಸೆಳೆತ ಕಡಿಮೆಯಾಗುವ ಸಂಭವವಿದೆ. 4 ಸರ್ಕಾರ ಮತ್ತು ಪಕ್ಷಗಳ ಪ್ರಭಾವವೂ ವ್ಯಾಪಕ ಕ್ಷೇತ್ರದಲ್ಲಿ ಕಡಿಮೆ ಎಂಬುದು ಇನ್ನೊಂದು ವಾದ. ಆದರೆ ಭಾರತದಲ್ಲಿ ಈಗಾಗಲೇ ಇತರ ದೇಶಗಳಿಗಿಂತ ದೊಡ್ಡ ವಿಸ್ತೀರ್ಣದ ಮತಕ್ಷೇತ್ರಗಳಿವೆ. ಇವನ್ನು ಸೇರಿಸಿ ಅನೇಕ ಸದಸ್ಯ ಕ್ಷೇತ್ರಗಳನ್ನು ರಚಿಸದರೆ ಅವು ವ್ಯವಹರಿಸಲು ಅಸಾಧ್ಯವಾಗುವಷ್ಟು ದೊಡ್ಡವಾಗುವುವು. ಅಲ್ಲದೆ ಭಾರತದಲ್ಲಿ ಉಮೇದುವಾರರಾಗಿ ನಿಲ್ಲುವವರಿಗೆ ಸ್ಥಾನಿಕ ಕ್ಷೇತ್ರ ನಿರ್ಬಂಧವಿಲ್ಲದ ಕಾರಣ ಸ್ಥಾನಿಕವಾದ ಸಂಕುಚಿತ ಸೆಳೆತಗಳಿಗೆ ಅವಕಾಶ ಕಡಿಮೆ. ಎಲ್ಲಕ್ಕೂ ಹೆಚ್ಚಾಗಿ ಇಂದು ಉಮೇದುವಾರರನ್ನು ಪಕ್ಷಗಳೇ ಆರಿಸುವುದರಿಂದ ಅವರ ಗುಣಮಟ್ಟದ ಹೊಣೆ ಪಕ್ಷಗಳದು. ಕ್ಷೇತ್ರದ ವ್ಯಾಪ್ತಿಗೆ ಅಲ್ಲಿ ಮಹತ್ತ್ವವೇ ಇಲ್ಲ. ಸರ್ಕಾರ ಮತದಾರರ ಮೇಲೆ ಒತ್ತಡ ತರುವುದಾದರೆ, ಎಲ್ಲ ಕಡೆಗೂ ಅದರ ಅಧಿಕಾರಿಗಳೇ ಇರುವಾಗ ಕ್ಷೇತ್ರದ ವಿಸ್ತಾರ ಸಂಕೋಚಗಳು ಅದಕ್ಕೇನೂ ಅಡ್ಡಿಯಾಗಲಾರವು. ಕ್ಷೇತ್ರ ವಿಸ್ತಾರವಾದರೆ ಪ್ರತಿನಿಧಿಗೆ ತನ್ನ ಮತದಾರರ ಸಂಪರ್ಕ ಇಟ್ಟುಕೊಳ್ಳುವುದು ಕಷ್ಟವಾಗುತ್ತದೆ. ದುರ್ಬಲ ಪಕ್ಷಗಳಿಗೆ ಚುನಾವಣಾ ಪ್ರಚಾರದ ವೆಚ್ಚ ಅಸಾಧ್ಯವಾಗಿ ಪರಿಣಮಿಸುತ್ತದೆ. ಅನುಪಾತೀಯ ಪ್ರತಿನಿಧಿತ್ವ ಅಥವಾ ಐಚ್ಛಿಕ ಮತದಾನ ಇರದಿದ್ದರೆ ಅನೇಕ ಸದಸ್ಯ ಕ್ಷೇತ್ರದಲ್ಲಿ ಎಲ್ಲ ಸ್ಥಾನಗಳೂ ಬಲಿಷ್ಟ ಪಕ್ಷಕ್ಕೇ ಹೋಗುವ ಸಂಭವವುಂಟು. ಈ ಕಾರಣಗಳಿಂದಾಗಿ ಅನೇಕ ಸದಸ್ಯ ಚುನಾವಣಾಕ್ಷೇತ್ರಗಳನ್ನು ಹಲವು ದೇಶಗಳಲ್ಲಿ ತೆಗೆದು ಹಾಕಲಾಯಿತು.

	ಏಕಸದಸ್ಯ ಕ್ಷೇತ್ರಗಳಲ್ಲೂ ಹಲವು ದೋಷಗಳುಂಟು. ಏಕಸದಸ್ಯ ಕ್ಷೇತ್ರದಲ್ಲಿ ಸೋತ ಸ್ಪರ್ಧಿಗೆ ಬಿದ್ದ ಮತಗಳಿಗೆ ಏನೂ ಮೌಲ್ಯವಿಲ್ಲ. ಅವೆಲ್ಲ ವ್ಯರ್ಥವಾಗುತ್ತವೆ. ಕೆಲವು ಸಲ ಗೆದ್ದ ಉಮೇದುವಾರನಿಗೆ ಬಿದ್ದ ಮತಗಳಲ್ಲಿ ಗೆಲ್ಲುವುದಕ್ಕೆ ಬೇಕಾಗುವಷ್ಟು ಬಿಟ್ಟು ಉಳಿದ ಮತಗಳೆಲ್ಲ ವ್ಯರ್ಥವಾದಂತೆಯೇ. ಅವಕ್ಕೆ ಯಾವ ಮೌಲ್ಯವೂ ಇಲ್ಲ. ಇದಕ್ಕೂ ಹೆಚ್ಚಿನ ದೋಷವೆಂದರೆ ಒಂದು ಏಕಸದಸ್ಯ ಕ್ಷೇತ್ರದಲ್ಲಿ ನಾಲ್ಕೈದು ಜನ ಉಮೇದುವಾರರಿದ್ದಾಗ ಅವರಲ್ಲಿ ಮತಗಳು ಹಂಚಿಹೋಗಿ ಅಲ್ಪಸಂಖ್ಯೆಯ ಮತಗಳಿಂದ ಒಬ್ಬ ಗೆಲ್ಲುತ್ತಾನೆ. ಈ ರೀತಿ ಗೆದ್ದ ಉಮೇದುವಾರರು ರಚಿಸಿದ ಸರ್ಕಾರ ನ್ಯಾಯವಾಗಿ ನೋಡಿದರೆ ಅಲ್ಪಸಂಖ್ಯಾತ ಮತದಾರರಿಂದ ಆಯ್ಕೆ ಹೊಂದಿದವರ ಸರ್ಕಾರವಾಗುತ್ತದೆ. ಇದು ಇಂಥ ಪ್ರಜಾಪ್ರಭುತ್ವದ ಒಂದು ವಿಪರ್ಯಾಸ ಪರಿಸ್ಥಿತಿ.

	ಅನುಪಾತೀಯ ಪ್ರತಿನಿಧಿತ್ವ : ಇಂಥ ದೋಷಗಳನ್ನು ನಿವಾರಿಸುವುದಕ್ಕಾಗಿ ಅನುಪಾತೀಯ ಪ್ರತಿನಿಧಿತ್ವವುಳ್ಳ ಅನೇಕ ಸದಸ್ಯ ಕ್ಷೇತ್ರಗಳೂ ಬೇಕೆಂದು ಹೇಳಲಾಗುತ್ತದೆ. ಉಮೇದುವಾರರಿಗೆ ಹಾಗೂ ಪಕ್ಷಗಳಿಗೆ ಹಾಕಲಾದ ಮತಗಳಿಗೆ ಅನುಪಾತೀಯವಾಗಿ ಸ್ಥಾನಗಳನ್ನು ಕೊಡುವುದೇ ಇದರ ತತ್ತ್ವ. ಇದರ ಪ್ರಕಾರ ಒಂದು ಪಕ್ಷ ಶೇ. 45 ಮತಗಳಿಸಿದರೆ ಅದಕ್ಕೆ ಶೇ. 45 ಸ್ಥಾನಗಳು ದೊರೆಯುವುವೇ ಹೊರತು ಅವಕ್ಕಿಂತ ಹೆಚ್ಚಲ್ಲ. ಅಂತೆಯೇ ಇತರ ಪಕ್ಷಗಳಿಗೂ ಅವು ಪಡೆದ ಮತಗಳಿಗೆ ಅನುಗುಣವಾಗಿ ಸ್ಥಾನಗಳು ಸಿಗುತ್ತವೆ. ಒಂದು ಕ್ಷೇತ್ರದಲ್ಲಿ ಒಂದೇ ಸದಸ್ಯ ಸ್ಥಾನವಿದ್ದಲ್ಲಿ ಅದನ್ನು ಉಮೇದುವಾರರು ಗಳಿಸಿದ ಮತಗಳ ಸಂಖ್ಯೆಗೆ ಅನುಗುಣವಾಗಿ ವಿಭಾಗಿಸಲಾಗುವುದಿಲ್ಲವಾದ್ದರಿಂದ ಈ ವ್ಯವಸ್ಥೆಯಲ್ಲಿ ಅನೇಕ ಸದಸ್ಯ ಕ್ಷೇತ್ರರಚನೆ ಅಗತ್ಯವಾಗುತ್ತದೆ. ಮೂರರಿಂದ ಏಳು ಸದಸ್ಯರಿರುವ ಕ್ಷೇತ್ರ ಹೆಚ್ಚು ಸಮರ್ಪಕವೆಂದು ಹೇಳಲಾಗಿದೆ. ಇದಕ್ಕೆ ಅತ್ಯಂತ ಉಚಿತವಾದ ಮತದಾನ ಪದ್ಧತಿಯೆಂದರೆ ಏಕಲ ವರ್ಗಸಾಧ್ಯ ಮತ (ಸಿಂಗಲ್ ಟ್ರಾನ್ಸ್‍ಫರಬಲ್ ವೋಟ್) ಪದ್ಧತಿ ಎಂದು ವಾದಿಸಲಾಗಿದೆ. ಐರ್ಲೆಂಡ್, ಟಾಸ್ಮೇನಿಯ, ಮಾಲ್ಟ ಮತ್ತು ಆಸ್ಟ್ರೇಲಿಯದ ಮತ್ತು ದಕ್ಷಿಣ ಆಫ್ರಿಕದ ಸೆನೆಟ್ ಚುನಾವಣೆಗಳಲ್ಲಿ ಜಾರಿಯಲ್ಲಿರುವ ಪದ್ಧತಿಯಿದು. ಮತದಾರರು ಮತಚೀಟಿಯ ಮೇಲೆ ಮುದ್ರಿತವಾಗಿರುವ ಉಮೇದುವಾರರ ಹೆಸರುಗಳ ಮುಂದೆ-ಅವರಿಗೆ ತಾವು ನೀಡುವ ಪ್ರಾಶಸ್ತ್ಯಾನು ಗುಣವಾಗಿ-1, 2, 3 ಇತ್ಯಾದಿ ಸಂಖ್ಯೆಗಳನ್ನು ಬರೆಯುತ್ತಾರೆ. ಮತಚೀಟಿಗಳ ಮೇಲೆ ನಮೂದಿಸಲಾದ ಪ್ರಥಮ ಪ್ರಾಶಸ್ತ್ಯ (ಅಧಿಮಾನ) ಮತಗಳಿಗೆ ಅನುಗುಣವಾಗಿ ಮೊದಲು ಅವುಗಳ ಎಣಿಕೆ ಮಾಡಲಾಗುತ್ತದೆ. ಯಾವ ಉಮೇದುವಾರನಿಗೆ ಅಗತ್ಯವಾದ ಡ್ರೂಪ್ ಕೋಟಾ (ಎಚ್. ಆರ್. ಡ್ರೂಪ್ ಎಂಬುವನು ಕಂಡುಹಿಡಿದ ಕೋಟಾ) ಎಂದರೆ-

ಚಲಾಯಿಸಲಾದ ಕ್ರಮಬದ್ಧ (ವ್ಯಾಲಿಡ್) ಮತಗಳು ಸಂಖ್ಯೆ +1
ಸ್ಥಾನಗಳ ಸಂಖ್ಯೆ + 1

ಪ್ರಥಮ ಪ್ರಾಶಸ್ತ್ಯ ಮತಗಳು ಬಂದಿರುತ್ತವೋ ಅವನು ಚುನಾಯಿತನಾದನೆಂದು ಘೋಷಿಸಲಾಗುತ್ತದೆ. ಐದು ಸದಸ್ಯರ ಕ್ಷೇತ್ರದಲ್ಲಿ ಒಬ್ಬ ಗೆಲ್ಲಲು ಒಟ್ಟು ಮತಗಳಲ್ಲಿ ಕನಿಷ್ಠ 1/5 ಮತಗಳನ್ನು ಗಳಿಸಬೇಕಾದ್ದಿಲ್ಲ. ಆರು ಮಂದಿ ಉಮೇದುವಾರರು ಒಟ್ಟು ಮತಗಳಲ್ಲಿ ತಲಾ 1/6 ಮತಗಳನ್ನು ಪಡೆಯಬಹುದು. ಆದರೆ ಐವರು ಮಾತ್ರ ಹೆಚ್ಚು ಗಳಿಸುವುದು ಸಾಧ್ಯ. ಚಲಾಯಿಸಲಾದ ಒಟ್ಟು ಮತಗಳು 1/6ಕ್ಕಿಂತ ಒಂದೇ ಒಂದು ಅಧಿಕ ಮತಗಳು ಬಂದಾಗ, ಆ ವಿಜಯಿ ಉಮೇದುವಾರನ ಎಲ್ಲ ಮತಗಳನ್ನೂ ಅವುಗಳಲ್ಲಿ ನಮೂದಾಗಿರುವ ದ್ವಿತೀಯ ಪ್ರಾಶಸ್ತ್ಯ ಮತಗಳಿಗೆ ಅನುಗುಣವಾಗಿ ವಿಂಗಡಿಸಲಾಗುತ್ತದೆ. ಇತರರಲ್ಲಿ ಪ್ರತಿಯೊಬ್ಬನಿಗೂ ಎಷ್ಟೆಷ್ಟು ಮತಗಳು ಬಂದಿವೆಯೆಂದು ಎಣಿಸಲಾಗುತ್ತದೆ. ವಿಜಯಿ ಉಮೇದುವಾರನಿಗೆ ಅವನ ಕೋಟಾಗಿಂತ ಎಷ್ಟು ಅಧಿಕ ಮತಗಳು ಬಂದಿವೆಯೋ ಅಷ್ಟನ್ನು ಮಾತ್ರ ಇತರರಿಗೆ ಹಂಚಬೇಕು. ಉದಾಹರಣೆಗೆ, ಕೋಟಾಗಿಂತ 1/3 ರಷ್ಟು ಅಧಿಕಮತಗಳು ಅವನಿಗೆ ಬಂದಿದ್ದರೆ ಇತರ ಉಮೇದುವಾರರಲ್ಲಿ ಒಬ್ಬೊಬ್ಬರಿಗೂ ಸೂಚಿಸಲಾಗಿರುವ ಆದ್ಯ ಪ್ರಾಶಸ್ರ್ಯ ಮತಗಳಲ್ಲಿ 1/3 ಭಾಗವನ್ನು ಅವರಲ್ಲಿ ಹಂಚಲಾಗುತ್ತದೆ. ಆನಂತರ ವಿಜಯಗಳಿಸುವ ಉಮೇದುವಾರರ ಅಧಿಕ ಮತಗಳನ್ನೂ ಹೀಗೆಯೇ-ಅಗತ್ಯವಿರುವ ತನಕ ಹಂಚಬೇಕು. ಹಾಗೂ ಯಾವ ಸ್ಥಾನಗಳಾದರೂ ಇನ್ನೂ ಖಾಲಿಯಾಗಿದ್ದ ಪಕ್ಷದಲ್ಲಿ, ಕನಿಷ್ಟ ಮತ ಚೀಟಿಗಳನ್ನು ಪಡೆದ ಉಮೇದುವಾರನನ್ನು ಕೈಬಿಟ್ಟು ಅವನ ಎಲ್ಲ ಮತಗಳನ್ನೂ ಅವುಗಳಲ್ಲಿ ಸೂಚಿತವಾಗಿರುವ ದ್ವಿತೀಯ ಪ್ರಾಶಸ್ತ್ಯಾನುಗುಣವಾಗಿ ಉಳಿದವರಲ್ಲಿ ಹಂಚಲಾಗುವುದು. ಎಲ್ಲ ಸ್ಥಾನಗಳೂ ಭರ್ತಿಯಾಗುವ ತನಕ ಈ ಪ್ರಕ್ರಿಯೆಯನ್ನು ಮುಂದುವರಿಸತಕ್ಕದ್ದು. ಮತದಾರರು ನೀಡುವ ಪ್ರಾಶಸ್ತ್ಯಾನುಗುಣವಾಗಿ ಫಲಿತಾಂಶಗಳಿರುತ್ತವೆ. ಯಾವ ಮತವೂ ವ್ಯರ್ಥವಾಗುವುದಿಲ್ಲ. ಆಯ್ಕೆ ಮಾಡಲು ಮತದಾರನಿಗೆ ಹೆಚ್ಚು ವ್ಯಾಪಕವಾದ ಅವಕಾಶ ದೊರೆತಂತಾಗುತ್ತದೆ. ವ್ಯಕ್ತಿಗಳಿಗೂ ಪಕ್ಷಗಳಿಗೂ ಬೆಂಬಲ ನೀಡಿದಂತಾಗುತ್ತದೆ.

	ಭಾರತದಲ್ಲಿ ಲೋಕಸಭೆ, ವಿಧಾನಸಭೆಗಳಿಗೆ ಚುನಾವಣೆಗಳು ಏಕಸದಸ್ಯ ಮತ ಕ್ಷೇತ್ರದಿಂದ ನಡೆಯುವುದಾದರರೂ ರಾಜ್ಯಸಭೆ, ವಿಧಾನಪರಿಷತ್ತು ಮತ್ತು ಕೆಲವು ಸಮಿತಿಗಳಿಗೆ ಅಧಿಮಾನ ಮತದಾನ (ಫ್ರಿಫರೆನ್ಷಿಯಲ್ ಓಟಿಂಗ್) ಪದ್ಧತಿಯನ್ನು ಅನುಸರಿಲಾಗುತ್ತದೆ. ಯೂರೋಪಿನ ಅನೇಕ ಪ್ರಜಾಸತ್ತಾತ್ಮಕ ದೇಶಗಳಲ್ಲಿ ಅನುಪಾತೀ ಪ್ರತಿನಿಧಿತ್ವ ಪದ್ಧತಿ ಇದೆ. ಅಲ್ಲಿ ಸ್ಥಿರವಾದ ಸಮರ್ಥವಾದ ಸರ್ಕಾರಗಳಿವೆ.

	ಅನುಪಾತೀ ಪ್ರತಿನಿಧಿತ್ವ ಪದ್ಧತಿಯಲ್ಲಿ ಅನೇಕ ಒಳ್ಳೆಯ ಅಂಶಗಳಿದ್ದರೂ ಈ ಪದ್ಧತಿ ಭಾರತದಂಥ ದೊಡ್ಡ ದೇಶಕ್ಕೆ ಅತ್ಯಂತ ಸಮರ್ಪಕವೆಂದು ಹೇಳಲಾಗದು. ಚುನಾವಣೆ ಅನೇಕ ಅಗತ್ಯಗಳನ್ನು ಪೂರೈಸಬೇಕಾಗುತ್ತದೆ. ಜಾತಿ, ಭಾಷೆ, ಮತ ಮುಂತಾದ ಅನೇಕ ವಿಚ್ಛಿನ್ನಕಾರಿ ಶಕ್ತಿಗಳಿರುವ ಭಾರತದಲ್ಲಿ ಪ್ರತಿಯೊಂದು ಚಿಕ್ಕಗುಂಪಿಗೂ ಸ್ಥಾನ. ಪ್ರಾತಿನಿಧ್ಯಗಳ ಆಶೆ ಹುಟ್ಟಿಸಿ ಅವನ್ನು ಪಡೆಯಲು ಎಲ್ಲ ಬಗೆಯ ಅಸಮರ್ಪಕ ಒಪ್ಪಂದ ಮತ್ತು ಪ್ರಚಾರಗಳಿಗೆ ಈ ಪದ್ಧತಿ ಎಡೆಮಾಡಿಕೊಡುತ್ತದೆ. ರಾಷ್ಟ್ರೀಯ ಏಕತೆಗೆ ಬುನಾದಿಯಂತಿರುವ ಸಂಯುಕ್ತ ಮತಕ್ಷೇತ್ರದ ಅಂತಃಸತ್ತ್ವವನ್ನೇ ಇದು ನಾಶಮಾಡಬಲ್ಲದು. ಅನೇಕ ಪಕ್ಷಗಳ ಉದ್ಭವವಾಗಿ ಶಾಸನ ಸಭೆಗಳಲ್ಲೂ ಕಾರ್ಯಾಂಗದ ಮೇಲೂ ಗೊಂದಲದ ಪರಿಣಾಮ ಉಂಟಾಗಬಹುದು. ಇಂಥ ಸ್ಥಿತಿಯಲ್ಲಿ ಸರ್ಕಾರದ ಅವ್ಯವಸ್ಥೆಯ, ಸೋಲುಗಳ ಹೊಣೆಯನ್ನು ಯಾವ ಒಂದು ಪಕ್ಷದ ಮೇಲೂ ಹೊರಿಸುವುದು ದುಸ್ತರವಾಗುವುದು. ಅನುಪಾತೀ ಪ್ರತಿನಿಧಿತ್ವದಲ್ಲಿರುವಂತೆ ಏಕಸದಸ್ಯ ಮತಕ್ಷೇತ್ರ ಪದ್ಧತಿಯಲ್ಲಿ ವಿವಿಧ ಅಭಿಪ್ರಾಯಗಳ ಯೋಗ್ಯ ಪ್ರಾತಿನಿಧ್ಯ ಸೌಕರ್ಯವಿಲ್ಲವಾದರೂ ಭಾರತದಲ್ಲಿ ಏಕಸದಸ್ಯ ಪದ್ಧತಿ ಸ್ಥಿರವಾದ ಮತ್ತು ಬಲವಾದ ಸರ್ಕಾರವನ್ನು ಈವರೆಗೆ ಒದಗಿಸಿದೆ.	
ಮತೀಯ ಅಥವಾ ಜಾತೀಯ ಪ್ರಾತಿನಿಧ್ಯ : ಮತಕ್ಷೇತ್ರಗಳು ಪ್ರಾದೇಶಿಕವಾಗಿರಬೇಕೆ? ಅಥವಾ ಜಾತೀಯ ವ್ಯಾಪ್ತಿಗೊಳಪಟ್ಟಿರಬೇಕೆ? ಎಂಬ ಪ್ರಶ್ನೆಗಳಿಂದಾಗಿ ಸೈದ್ಧಾಂತಿಕ ವಿಚಾರದ ಪ್ರಸ್ತಾಪ ಅಗತ್ಯವಾಗುತ್ತದೆ. ವ್ಯಕ್ತಿಗೆ ಆತ ಒಬ್ಬ ವ್ಯಕ್ತಿಯೆಂದೇ ರಾಜಕೀಯ ಹಕ್ಕನ್ನು ಪ್ರಜಾಸತ್ತೆಯ ಸಿದ್ಧಾಂತ ಕೊಡಮಾಡುವುದೇ ಹೊರತು. ಆತ ವಿಶಿಷ್ಟ ಜಾತಿ ಅಥವಾ ಸಮಾಜಕ್ಕೆ ಸೇರಿದವನೆಂಬ ಕಾರಣಕ್ಕಾಗಿ ಅಲ್ಲ. ಅಂಥ ಗುಂಪುಗಳಿಲ್ಲವೆಂದು ಇದರ ಅರ್ಥವಲ್ಲ. ರಾಜಕೀಯ ಹಕ್ಕು ಬಾಧ್ಯತೆಗಳಿಗೂ ಇಂಥ ಗುಂಪುಗಳಿಗೂ ಸಂಬಂಧವಿಲ್ಲವೆಂಬುದು ಮುಖ್ಯ. ರಾಷ್ಟ್ರೀಯ ಪ್ರಜ್ಞೆ ಪ್ರಬಲವಾಗಿರುವಂಥ ದೇಶಗಳ ನಾಗರಿಕರಲ್ಲಿ ಗುಂಪುಗಳಿಗೆ ಅನುಗುಣವಾದ ಲಾಭಗಳ ಭಾವನೆ ಬರುವುದು ಶಕ್ಯವಿಲ್ಲ. ಇದನ್ನು ಅನೇಕ ದೇಶಗಳಲ್ಲಿ ಕಾಣಬಹುದು. ಆದರೆ ಏಷ್ಯ ಹಾಗೂ ಆಫ್ರಿಕದ ಕೆಲವು ದೇಶಗಳಲ್ಲಿ ರಾಷ್ಟ್ರೀಯ ಪ್ರಜ್ಞೆ ಪೂರ್ತಿಯಾಗಿ ಇಲ್ಲ ಅಥವಾ ಆಳವಾಗಿ ಬೇರೂರಿಲ್ಲ. ಇಂಥ ಸಮಾಜಗಳಲ್ಲಿ ವ್ಯಕ್ತಿ ರಾಷ್ಟ್ರಕ್ಕಿಂತ ಹೆಚ್ಚಾಗಿ ತನ್ನದೆಂದುಕೊಂಡ ಜಾತಿ, ಗುಂಪು ತಂಡಗಳಿಗೆ ಅಂಟಿಕೊಂಡಿರುತ್ತಾನೆ. ಇಂಥಲ್ಲಿ ಅತೃಪ್ತಿ, ಸಂಶಯ ಉಸಿರಾಡುತ್ತವೆ. ಒಂದು ಗುಂಪನ್ನು ಇನ್ನೊಂದು ಗುಂಪಿನವ ಪ್ರತಿನಿಧಿಬಲ್ಲನೆಂಬ ಬಗ್ಗೆ ವಿಶ್ವಾಸವಿರುವುದಿಲ್ಲ. ಅದಕ್ಕಾಗಿ ಜಾತೀಯ ಪ್ರಾತಿನಿಧ್ಯ, ಮತಕ್ಷೇತ್ರ ಮುಂತಾದವುಗಳ ಬೇಡಿಕೆ ಮುಂದೆ ಬರುತ್ತದೆ. ಇದೊಂದು ಅಪ್ರಬುದ್ಧ ಸ್ಥಿತಿ; ಪ್ರಜಾಸತ್ತೆಗೆ ಪ್ರತಿಕೂಲಕರ. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಜಾತೀಯ ಮತಕ್ಷೇತ್ರಗಳಿದ್ದುವು. ಭಾರತದ ವಿಭಜನೆಗೂ ಈ ಜಾತೀಯ ಮತಕ್ಷೇತ್ರಗಳೇ ಕಾರಣವಾದವು. ಇವುಗಳಿಂದ ಅನೈಕ್ಯ ಹೆಚ್ಚಲು ಅವಕಾಶವಾಯಿತು. ಗಣರಾಜ್ಯ ಭಾರತದಲ್ಲಿ ಜಾತೀಯ ಮತಕ್ಷೇತ್ರಗಳಿಲ್ಲ. ಆದರೂ ಅನುಸೂಚಿತ ವರ್ಗಗಳಿಗೆ ಸ್ಥಾನಗಳನ್ನು ಕಾದಿರಿಸಲಾಗಿದೆ. ಈ ಸೌಲಭ್ಯ ಮೊದಲು ಹತ್ತು ವರ್ಷಗಳಿಗೆ ಸೀಮಿತವಾಗಿತ್ತು. ಈಗ ಇದು ಮುಂದುವರಿದಿದೆ. ಸಾಮಾಜಿಕ ವರ್ಗಗಳ ಆಧಾರದ ಮೇಲೆ ಸ್ಥಾನಗಳನ್ನು ಕಾಯ್ದಿರಿಸಲಾಗಿದೆ. ಈ ಸೌಲಭ್ಯ ಮೊದಲು ಹತ್ತು ವರ್ಷಗಳಿಗೆ ಸೀಮಿತವಾಗಿತ್ತು. ಈಗ ಇದು ಮುಂದುವರಿದಿದೆ. ಸಾಮಾಜಿಕ ವರ್ಗಗಳ ಆಧಾರದ ಮೇಲೆ ಸ್ಥಾನಗಳನ್ನು ಕಾಯ್ದಿರಿಸುವುದೂ ಮತಕ್ಷೇತ್ರ ರಚಿಸುವುದೂ ಜಾತಿ ವೈಷಮ್ಯವನ್ನು ಶಾಶ್ವತಗೊಳಿಸಲು ಸಹಾಯಕವಾಗುವುದೆಂದು ವಾದಿಸಲಾಗಿದೆ. ವರ್ಗೀಯ ಅಥವಾ ಜಾತೀಯ ಪ್ರಾತಿನಿಧ್ಯ ಪದ್ಧತಿ ರಾಷ್ಟ್ರೀಯ ಭಾವನೆಗೆ ಪೋಷಕವಾದುದಲ್ಲವೆನ್ನಬಹುದು.

	ಪ್ರತ್ಯಕ್ಷ ಹಾಗೂ ಪರೋಕ್ಷ ಚುನಾವಣೆ : ಭಾರತದಲ್ಲಿ ಲೋಕಸಭೆ, ವಿಧಾನಸಭೆಗಳಿಗೆ ಮತದಾರರಿಂದ ನೇರವಾಗಿ ಸದಸ್ಯರ ಚುನಾವಣೆ ಆಗುತ್ತದೆ. ಇತರ ಅನೇಕ ದೇಶಗಳಲ್ಲಿ ಇದೇ ಪದ್ಧತಿ ಉಂಟು. ಪರೋಕ್ಷ ಚುನಾವಣೆಯಲ್ಲಿ ನಿಶ್ಚಿತ ಸಂಖ್ಯೆಯ ಮತದಾರರಿಂದ ಮತ ಪಡೆದು ಆಯ್ಕೆಯಾದವರನ್ನೊಳಗೊಂಡ ಪ್ರತಿನಿಧಿಗಳದೇ ಒಂದು ಮತಕ್ಷೇತ್ರ ರಚಿತವಾಗುತ್ತದೆ. ಅಲ್ಲಿಂದ ಅವರು ಪ್ರತಿನಿಧಿಗಳನ್ನು ಆರಿಸುತ್ತಾರೆ. ಕೊನೆಗೆ ಪ್ರತಿನಿಧಿಯಾಗಿ ಅಧಿಕಾರ ಪಡೆದು ನಿಲ್ಲುವಾತ ಮತದಾರರ ಪ್ರತಿನಿಧಿಗಳ ಮತಗಳಿಂದ ಆಯ್ಕೆ ಹೊಂದುತ್ತಾನೆ. ಇದು ಪರೋಕ್ಷ ಚುನಾವಣೆ. ಪ್ರತ್ಯಕ್ಷ ಚುನಾವಣೆಯಲ್ಲಿ ಸರ್ಕಾರದ ಮೇಲೆ ಮತದಾರನ ನೇರ ಹತೋಟಿ ಇರುವುದು ಸಾಧ್ಯ. ಅಲ್ಲದೆ ಮತದಾರರ ಸಂಖ್ಯೆ ಹಾಗೂ ಕ್ಷೇತ್ರ ಸಂಕುಚಿತವಾದಷ್ಟೂ ಲಂಚ, ಅಲ್ಪವಾಗಿರುವುದೇ ಎಲ್ಲ ದುರ್ನಡತೆಗಳಿಗೆ ಕಾರಣವಾಗಿದೆಯೆಂದು ಪಂಚಾಯಿತಿ ರಾಜ್ಯ ಚುನಾವಣೆಗಳನ್ನು ಕುರಿತು ವರದಿ ಮಾಡಲು ನೇಮಕವಾದ ಸಂತಾನಂ ಸಮಿತಿ (1964) ವರದಿ ನೀಡಿದೆ.

	ಆದರೂ ಭಾರತದಲ್ಲಿ ಪರೋಕ್ಷ ಚುನಾವಣೆಗಳ ಪ್ರತಿಪಾದಕರೂ ಇದ್ದಾರೆ. ಭಾರತದಲ್ಲಿ ಪಂಚಾಯಿತಿಯಿಂದಾರಂಭಿಸಿ ವಿಧಾನ ಮಂಡಲದವರೆಗೆ ಐದು ಹಂತಗಳಲ್ಲಿ ಸರ್ಕಾರವಿದೆ. ಒಂದು ಸಂಸ್ಥೆಯ ಪ್ರತಿನಿಧಿಗಳು ತಮ್ಮ ಮೇಲಿನ ಹಂತದ ಸಂಸ್ಥೆಗೆ ಪ್ರತಿನಿಧಿಗಳನ್ನು ಆರಿಸುವಂತೆ ಮಾಡಿ ಅವುಗಳಲ್ಲಿ ಪರಸ್ಪರ ಸಂಬಂಧ ಕಲ್ಪಿಸಬೇಕೆಂದು ವಾದಿಸಲಾಗಿದೆ. ಮತದಾರರು ಗ್ರಾಮ ಪಂಚಾಯಿತಿಯನ್ನು, ಪಂಚಾಯಿತಿ ಸದಸ್ಯರು ಪಂಚಾಯಿತಿ ಸಮಿತಿಯ ಸದಸ್ಯರನ್ನು (ತಾಲ್ಲೂಕು ಅಭಿವೃದ್ಧಿ ಮಂಡಲ), ಆ ಸಮಿತಿಯ ಸದಸ್ಯರು ಜಿಲ್ಲಾ ಪರಿಷತ್ತಿನ ಸದಸ್ಯರನ್ನು, ಪರಿಷತ್ ಸದಸ್ಯರು ವಿಧಾನಸಭಾ ಸದಸ್ಯರನ್ನು, ಅವರು ಸರ್ಕಾರದ ಮಂತ್ರಿಮಂಡಲವನ್ನು-ಹೀಗೆ ಆಯ್ಕೆಮಾಡುತ್ತ ಹೋಗಬೇಕೆಂಬುದು ಇವರ ಮತ.

	ಮತದಾರನಿಗಿಂತ ಚುನಾಯಿತ ಸದಸ್ಯ ಹೆಚ್ಚು ಬುದ್ಧಿವಂತನಿರುತ್ತಾನೆ ಮತ್ತು ವಿವಿಧ ಹಂತಗಳ ಸಂಸ್ಥೆಗಳಲ್ಲಿ ಪರಸ್ಪರ ಸಂಬಂಧ ಉಳಿದು ಬರುತ್ತದೆ-ಎಂಬುದು ಈ ವ್ಯವಸ್ಥೆಯ ಪ್ರತಿಪಾದಕರು ನೀಡುವ ಕಾರಣ. ಇದು ಸಂದಿಗ್ಧವಾದ ವಿಚಾರ. ಈ ಪದ್ಧತಿಯಿಂದ ಮತದಾರನ ಸ್ವಾತಂತ್ರ್ಯ ಸೀಮಿತವಾಗುತ್ತದೆ. ಚುನಾವಣೆಯ ಅಧಿಕಾರ ಕ್ರಮೇಣ ಕೆಲಕೆಲವೇ ಜನರಲ್ಲಿ ಕೇಂದ್ರಿಕೃತವಾಗುತ್ತ ಹೋಗಿ, ಅದು ದುವ್ರ್ಯಹಾರಕ್ಕೆ ಹೆಚ್ಚು ಆಸ್ಪದ ನೀಡುತ್ತದೆ. ಆಡಳಿತದ ವಿವಿಧ ಹಂತಗಳ ಸಂಬಂಧಗಳ ಬಿಗಿ ಹೆಚ್ಚಿದಂತೆ ಮೇಲಣ ಹಂತದ ರಾಜಕೀಯ ಕೆಳಗಿನ ಹಂತಕ್ಕೂ ಹಬ್ಬುತ್ತದೆ. ಆದ್ದರಿಂದ ಪ್ರಜಾಪ್ರಭುತ್ವವೂ ಪರೋಕ್ಷ ಚುನಾವಣೆಯೂ ಜೊತೆಜೊತೆಯಾಗಿ ಹೋಗಲಾರವು ಎಂಬುದು ಪರೋಕ್ಷ ಚುನಾವಣೆಯ ವಿರೋಧಿಗಳ ವಾದ.
ಉಮೇದುವಾರ ಮತ್ತು ರಾಜಕೀಯ ಪಕ್ಷಗಳು

ಚುನಾವಣೆಯಲ್ಲಿ ಭಾಗವಹಿಸುವವರು ಇಬ್ಬರು; ಮತದಾರ ಮತ್ತು ಉಮೇದುವಾರ. ಒಂದು ಸ್ಥಾನಕ್ಕೆ ಒಬ್ಬನೇ ಉಮೇದುವಾರನಿದ್ದರೆ ಚುನಾವಣೆ ಅಗತ್ಯವಿಲ್ಲ. ಒಂದು ಸ್ಥಾನಕ್ಕೆ ಚುನಾವಣೆ ನಡೆಯಬೇಕಾದರೆ ಕನಿಷ್ಠ ಇಬ್ಬರು ಉಮೇದುವಾರರಿರಬೇಕು. ಚುನಾವಣೆಯಲ್ಲಿ ಉಮೇದುವಾರನಾಗಿ ನಿಲ್ಲುವವನಿಗೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕೆಂಬುದು ಆದರ್ಶ.
ಅರ್ಹತೆ : ಭಾರತದಲ್ಲಿ ಮತದಾರನಿಗೆ ಅರ್ಹತಾ ವಯಸ್ಸು 21 ವರ್ಷಗಳಾದರೆ ಲೋಕಸಭೆ, ವಿಧಾನಸಭೆಗಳ ಪ್ರತಿನಿಧಿಯಾಗಬಯಸುವ ಉಮೇದುವಾರನಿಗೆ 25 ವರ್ಷಗಳಿರಬೇಕೆಂಬುದು ಸಂವಿಧಾನದ ವಿಧಿ. ಮತದಾರನಿಗಿಂತ ಅಭ್ಯರ್ಥಿ ತಿಳಿವಳಿಕೆಯಲ್ಲಿ ಹೆಚ್ಚು ಸಮರ್ಥನಾಗಿರಬೇಕೆಂಬುದು ಇದರ ಹಿಂದಿನ ಆಶಯ. 1951ರ ಜನತಾ ಪ್ರಾತಿನಿಧ್ಯ ಅಧಿನಿಯಮದ (ರೆಪ್ರೆಸೆಂಟೇಷನ್ ಆಫ್ ಪೀಪಲ್ಸ್ ಆಕ್ಟ್) ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆದಾಗ ವಯಸ್ಸಿನೊಂದಿಗೆ ಶಿಕ್ಷಣವೇ ಮುಂತಾದ ಅರ್ಹತೆಗಳನ್ನೂ ವಿಧಿಸುವ ಬಗ್ಗೆ ಚರ್ಚೆಯಾಯಿತು. ಆದರೆ ಸಮರ್ಪಕವಾದ ಅರ್ಹತಾ ಸೂತ್ರ ಕಂಡುಹಿಡಿಯುವುದು ಅಸಾಧ್ಯವೆಂದು ತೋರಿ, ರಾಜಕೀಯ ಪಕ್ಷಗಳೇ ತಮ್ಮ ಉಮೇದುವಾರರನ್ನು ಆರಿಸುವಾಗ ಆ ಬಗ್ಗೆ ಗಮನ ಕೊಡಬೇಕೆಂದು ಆ ವಿಚಾರ ಕೈಬಿಡಲಾಯಿತು. ಒಟ್ಟಿನಲ್ಲಿ ಅಧಿನಿಯಮವಿಲ್ಲದೆಯೇ ಈ ಕರಾರು ಪೂರ್ತಿಯಾದಂತಾಗಿದೆ. 1952ರಲ್ಲಿ ಚುನಾಯಿತರಾದ 499 ಮಂದಿ ಲೋಕಸಭಾ ಸದಸ್ಯರಲ್ಲಿ 301 ಜನ ಪದವೀಧರರು, 66 ಜನ ಇಂಟರ್ಮೀಡಿಯೆಟ್ ಓದಿದವರು, 60 ಜನ ಪ್ರೌಢಶಾಲೆ ತಲುಪಿದವರು. 7 ಜನ ಮಾಧ್ಯಮಿಕ ಶಾಲೆಯವರೆಗೆ ಬಂದವರು ಇದ್ದರು. ಉಳಿದವರಲ್ಲಿ 24 ಜನ ಬೇರೆ ಬಗೆಯ ಶಿಕ್ಷಣ ಪಡೆದವರಿದ್ದರು. 127 ಜನ ವಕೀಲರು, 38 ಜನ ಪತ್ರಕರ್ತರು, 34 ಜನ ಶಿಕ್ಷಣತಜ್ಞರು, 34 ಜನ ಇತರ ವೃತ್ತಿನಿರತರು, 70 ಜನ ವ್ಯಾಪಾರಿಗಳು, 122 ಜನ ಭೂಮಿಗೆ ಸಂಬಂಧಿಸಿದವರು. ಬೇರಾವ ದೇಶದಲ್ಲೂ ಈ ಬಗೆಯ ಅರ್ಹತೆಯನ್ನು ಕುರಿತ ಪ್ರತ್ಯೇಕ ಅಧಿನಿಯಮಗಳಿಲ್ಲ. ಉಮೇದುವಾರ ನಿಲ್ಲುವ ಕ್ಷೇತ್ರದಲ್ಲಿ ಅವನು ಮತದಾರನಾಗಿರಬೇಕೆಂಬ ನಿರ್ಬಂಧ ಕೆಲವು ದೇಶಗಳಲ್ಲಿವೆ. ಭಾರತದಲ್ಲಿ ಈ ನಿರ್ಬಂಧವೂ ಇಲ್ಲ. ಇತರ ದೃಷ್ಟಿಗಳಿಂದ ಅರ್ಹತೆಯುಳ್ಳ ನಾಗರಿಕ ಯಾವ ಕ್ಷೇತ್ರದಲ್ಲಾದರೂ ಚುನಾವಣೆಗೆ ಸ್ಪರ್ಧಿಸಬಹುದು.

ಇನ್ನೊಂದು ನಿಬಂಧನೆ ಠೇವಣಿಯನ್ನು ಕುರಿತದ್ದು. ಲೋಕಸಭೆ ವಿಧಾನಸಭೆಗಳಿಗೆ ಉಮೇದುವಾರರು ಠೇವಣಿಯನ್ನು ನಾಮನಿರ್ದೇಶ ಪತ್ರದೊಂದಿಗೆ ಕೊಡಬೇಕಾಗುತ್ತದೆ. ಠೇವಣಿಯ ಮೊಬಲಗನ್ನು ಆಗಿಂದಾಗ್ಗೆ ಹೆಚ್ಚಿಸಲಾಗುತ್ತದೆ. ಅನುಸೂಚಿತ ವರ್ಗದ ಉಮೇದುವಾರರಿಗೆ ರಿಯಾಯಿತಿ ನೀಡಲಾಗಿದೆ. ಬೇರೆ ಬೇರೆ ಸಂಸ್ಥೆಗಳ ಚುನಾವಣೆಗಳಿಗೆ ಠೇವಣಿಯ ಮೊತ್ತ ಬೇರೆಬೇರೆ. ಉಮೇದುವಾರರು ಹೊಣೆಗೇಡಿಗಳಾಗದಂತೆ ತಡೆಯಲು ಠೇವಣಿ ಅಗತ್ಯವೆಂದು ವಾದಿಸಲಾಗಿದೆ. ಒಂದು ಕ್ಷೇತ್ರದಿಂದ ಚಲಾಯಿಸಲಾದ ಒಟ್ಟು ಮತಗಳ 1/8ಕ್ಕಿಂತ ಕಡಿಮೆ ಮತ ಗಳಿಸಿದ ಉಮೇದುವಾರನ ಠೇವಣಿ ಹಣ ಸರ್ಕಾರಕ್ಕೆ ಮುಟ್ಟುಗೋಲಾಗುತ್ತದೆ. ಯೋಗ್ಯ ಹಾಗೂ ಬಡವನಾದ ಉಮೇದುವಾರನ ಹಿತದೃಷ್ಟಿಯಿಂದ ಠೇವಣಿಯ ಮೊಬಲಗಿಗೆ ಸಂಬಂಧಿಸಿದಂತೆ ಮತ್ತು ಅದನ್ನು ಮರಳಿಸುವ ಬಗ್ಗೆ ನಿಯಮಗಳನ್ನು ಸಡಿಲಗೊಳಿಸಬೇಕೆಂದು ಅನೇಕ ಸೂಚನೆಗಳು ಬರುತ್ತಿವೆ.
ಉಮೇದುವಾರರ ಅನರ್ಹತೆಗಳು : ಭಾರತದ ಮತ್ತು ಇತರ ಕಾಮನ್ ವೆಲ್ತ್ ರಾಷ್ಟ್ರಗಳ ಚುನಾವಣಾ ಅಧಿನಿಯಮಗಳ ಪ್ರಕಾರ, ಆಯಾ ದೇಶಗಳ ನಾಗರಿಕರಲ್ಲದವರು, ಮತಿವಿಕಲರು, ದಿವಾಳಿಗಳು, ಸರ್ಕಾರಿ ಸ್ಥಾನದಲ್ಲಿರುವವರು, ಸರ್ಕಾರದಿಂದ ಕಾಂಟ್ರಾಕ್ಟ್ ಪಡೆದವರು-ಇವರು ವಿಧಾನ ಹಾಗೂ ಲೋಕಸಭೆಗಳ ಸದಸ್ಯರಾಗಲು ಅನರ್ಹರು. ಆದ್ದರಿಂದ ಇಂಥವರು ಉಮೇದುವಾರರಾಗಿ ಸ್ಪರ್ಧಿಸಲಾರರು. ಈ ಅನರ್ಹತೆಗಳ ಬಗ್ಗೆ ಭಿನ್ನಾಭಿಪ್ರಾಯಗಳೇ ಇಲ್ಲ.
ಆಫ್ರಿಕದ ಅನೇಕ ದೇಶಗಳಲ್ಲಿ ಬಹುತೇಕ ಸುಶಿಕ್ಷಿತರೆಲ್ಲ ಸರ್ಕಾರಿ ಕೆಲಸಗಳಲ್ಲಿರುವ ಕಾರಣ ಇಂಥ ನಿರ್ಬಂಧದಿಂದಾಗಿ ಅನಕ್ಷರಸ್ಥರಿಗೇ ಸರ್ಕಾರದಲ್ಲಿ ಅವಕಾಶ ಉಂಟಾಗಿದೆ. ಈ ಪರಿಸ್ಥಿತಿಯನ್ನು ನಿವಾರಿಸಲು ಪ್ರಯತ್ನ ನಡೆದಿದೆ. ಯೂರೋಪಿನ ಕೆಲವು ದೇಶಗಳಲ್ಲಿ ಲೋಕಸೇವಾ ಅಧಿಕಾರಿಗಳಿಗೂ ವಿಧಾನಸಭೆಗಳ ಸದಸ್ಯರಾಗಲು ಕೆಲವು ಷರತ್ತುಗಳ ಮೇಲೆ ಅವಕಾಶ ನೀಡಲಾಗಿದೆ. ಆದರೆ ವಿಧಾನ ಸಭಾಸದಸ್ಯನಾದ ಅಧಿಕಾರಿ ಸರ್ಕಾರವನ್ನು ಟೀಕಿಸುವ, ಯಾವುದಾದರೊಂದು ಪಕ್ಷಕ್ಕೆ ಹೊಂದಿಕೊಂಡು ಕೆಲಸ ಮಾಡುವ ಸಂದರ್ಭ ಬರುವುದರಿಂದ, ಆತನ ಸದಸ್ಯತ್ವದ ಅವಧಿ ಮುಗಿದ ಮೇಲೆ ಸರ್ಕಾರಿ ಕೆಲಸಕ್ಕೆ ಅವನು ಮರಳಿದಾಗ ಮಂತ್ರಿಗಳಿಗೆ ವಿಶ್ವಾಸ ಮೂಡುವುದು ಕಷ್ಟವಾಗುವುದೆಂಬುದು ಒಂದು ವಾದ. ಆದ್ದರಿಂದಲೆ ಇವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇಲ್ಲದಿರುವುದು ಆರೋಗ್ಯಕರವಾದ ಸ್ಥಿತಿಯೆಂದು ಭಾವಿಸಲಾಗಿದೆ. ಆದರೆ ಸರ್ಕಾರದ ಕಾರ್ಯ ವ್ಯಾಪಕವಾದಂತೆ ಸರ್ಕಾರಿ ನೌಕರರ ಸಂಖ್ಯೆ ಕೋಟಿಗಟ್ಟಲೆ ಆದಾಗ ವಿದ್ಯಾವಂತ ಪ್ರೌಢರ ಇಷ್ಟು ದೊಡ್ಡ ಭಾಗವನ್ನು ರಾಜಕೀಯ ಹಕ್ಕುಗಳಿಂದ ವಂಚಿತರನ್ನಾಗಿ ಇಡುವುದು ಸಾಧುವಾದ್ದೆ? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಇದಕ್ಕೆ ಭವಿಷ್ಯವೇ ಉತ್ತರಿಸಬೇಕು. ಸಾಮಾನ್ಯವಾಗಿ ಹೇಳುವುದಾದರೆ, ಇಂದು ಚುನಾವಣೆಯಲ್ಲಿ ಉಮೇದುವಾರನಾಗುವ ನಾಗರಿಕನ ಮೇಲೆ ಹೆಚ್ಚು ಸ್ವಾತಂತ್ರ್ಯವಿದೆಯೆಂದು ಹೇಳಲಾಗಿದೆ. ಆದರೆ ಈ ಸ್ವಾತಂತ್ರ್ಯ ವಾಸ್ತವವಾಗಿ ಎಷ್ಟರಮಟ್ಟಿಗೆ ಲಭಿಸಿದೆ? ಇಂದಿನ ಚುನಾವಣಾ ಕ್ಷೇತ್ರಗಳ ವ್ಯಾಪ್ತಿ, ಚುನಾವಣೆಗೆ ತಗಲುವ ವೆಚ್ಚ ಇವನ್ನು ನೋಡಿದರೆ ಕಾನೂನಿನಿಂದ ಲಭ್ಯವಾದ ಸ್ವಾತಂತ್ರ್ಯ, ನೂರಾರು ಜನ ಕಾರ್ಯಕರ್ತರನ್ನು ಲಕ್ಷಾನುಗಟ್ಟಲೆ ಹಣದ ವೆಚ್ಚದಲ್ಲಿ ಸಂಘಟಿಸಬಲ್ಲ ಶ್ರೀಮಂತನಿಗೆ ಮಾತ್ರ ಸಿಗುವಂತಿದೆ. ಲೋಕಸತ್ತೆಯ ಹಿತಕ್ಕಾಗಿ ಈ ಸ್ಥಿತಿ ಬದಲಾಗಬೇಕೆಂದು ವಾದಿಸಲಾಗಿದೆ.
ಚುನಾವಣೆಯ ಖರ್ಚುಗಳ ಅಧಿನಿಯಮದ ಪ್ರಕಾರ ಲೋಕಸಭೆಗೆ ರೂ. 25,000, ವಿಧಾನಸಭೆಗೆ ರೂ. 7,000 ವರೆಗೆ ಖರ್ಚುಮಾಡಬಹುದೆಂದು ಮೊದಲು ನಿಗಧಿಯಾಗಿದ್ದರೂ ಆ ಗರಿಷ್ಠ ಮಿತಿಗಳು ಏರುತ್ತಾ ಹೋಗಿ, ಸಾಮಾನ್ಯ ಉಮೇದುವಾರ ಸಾಮಥ್ರ್ಯವನ್ನು ಮೀರಿ, ಅವನನ್ನು ಒಂದು ರೀತಿಯಲ್ಲಿ ಸ್ಪರ್ಧೆಗೆ ಅನರ್ಹನನ್ನಾಗಿ ಮಾಡಿವೆ. ಕಾನೂನುಬದ್ಧ ಖರ್ಚುಗಳೇ ಇಷ್ಟು ಹೆಚ್ಚಿದಾಗ, ಚುನಾವಣಾ ಕ್ಷೇತ್ರದಲ್ಲಿ ಮತದಾರರನನ್ನು ಸಂತೋಷವಾಗಿಡಲು, ಅವರ ಸ್ಥಾನಿಕ ಮುಂದಾಳುಗಳನ್ನು ಸಂತೃಪ್ತಿಯಿಂದ ಇಡಲು ಮಾಡಬೇಕಾದ ಖರ್ಚುಗಳು ಸರ್ಕಾರದ ಗಮನಕ್ಕೆ ಬರುವುದಿಲ್ಲ. ಹಣವಂತರು ಇದಕ್ಕೆಲ್ಲ ಸಾಕಷ್ಟು ಖರ್ಚುಮಾಡಬಲ್ಲರು. ಕಾನೂನಿಗೆ ಅನುಗುಣವಾದ ಖರ್ಚಿನ ಪರಿಮಿತ ಸಹ ಧನವಂತ ಹಾಗೂ ಧನಹೀನರ ನಡುವಣ ಅಂತರವನ್ನು ಕಡಿಮೆ ಮಾಡುವಲ್ಲಿ ಸಫಲವಾಗಿಲ್ಲವೆನ್ನಬಹುದು. ಚುನಾವಣೆಯ ಎಲ್ಲ ಖರ್ಚುಗಳನ್ನೂ ಸರ್ಕಾರವೇ ವಹಿಸಬೇಕೆಂಬ ಸಲಹೆಗಳು ಬಂದಿವೆ. ಆದರೆ ಇದು ರಾಜಕೀಯ ಮತ್ತು ಆಡಳಿತ ಕಾರಣಗಳಿಂದಾಗಿ ಗ್ರಾಹ್ಯವಾಗಿಲ್ಲ. ಈ ಸಂಬಂಧವಾಗಿ ಯೋಚಿಸುವಾಗ ರಾಜಕೀಯ ಪಕ್ಷಗಳ ಪತ್ರವನ್ನೂ ಪರಿಗಣಿಸಬೇಕಾಗುತ್ತದೆ. ಈ ಪಕ್ಷಗಳು ದುರ್ಬಲರಾದ ಆದರೆ ಅರ್ಹರಾದ ಉಮೇದುವಾರರ ಬೆಂಬಲಕ್ಕೆ ನಿಂತು ಧನಸಹಾಯ, ಜನಸಹಾಯ ಮಾಡಿ ಚುನಾವಣೆಯಲ್ಲಿ ಅವರನ್ನು ದಾಟಿಸಲು ಸಮರ್ಥವಾಗಬಹುದು.
ರಾಜಕೀಯ ಪಕ್ಷಗಳ ಪಾತ್ರ : ಪ್ರಜಾಸತ್ತಾತ್ಮಕ ಸಂವಿಧಾನಗಳಲ್ಲಿ ಸಂಘ ಸ್ವಾತಂತ್ರ್ಯವೂ ಒಂದು ಮೂಲಭೂತ ಹಕ್ಕು. ಕ್ರಿಯಾಶೀಲರೂ, ಚಟುವಟಿಕೆಯವರೂ ಆದ ನಾಗರಿಕರು ಪ್ರತಿಯೊಂದು ಪ್ರಜಾಸತ್ತಾತ್ಮಕ ದೇಶದಲ್ಲಿ ಈ ಸ್ವಾತಂತ್ರ್ಯವನ್ನು ಬಳಸಿಕೊಂಡು ರಾಜಕೀಯ ಪಕ್ಷಗಳನ್ನು ಕಟ್ಟಿಕೊಂಡಿದ್ದಾರೆ. ಪಕ್ಷ ಎಂಬ ಶಬ್ದಕ್ಕೆ ಅನೇಕ ಅರ್ಥಗಳನ್ನು ಹೇಳಬಹುದಾದರೂ, ಸರ್ಕಾರದ ಮೇಲೆ ನಿಯಂತ್ರಣ ಸಾಧಸಬೇಕೆನ್ನುವ ಮುಖಂಡರ ಸಂಸ್ಥೆಯೇ ಪಕ್ಷವೆಂಬುದು ಪ್ರಕೃತಕ್ಕೆ ಒಪ್ಪುವ ವ್ಯಾಖ್ಯೆ. ಮತದಾರರಿಗೆ ಮುಖಂಡರ ಒಂದು ಗುಂಪಿನಿಂದ ಬೇಸರ ಬಂದರೆ ಇನ್ನೊಂದು ಗುಂಪನ್ನು ಅಧಿಕಾರದಲ್ಲಿ ತರುವುದು ಈ ರಾಜಕೀಯ ಪಕ್ಷಗಳಿರುವುದರಿಂದ ಸಾಧ್ಯವಾಗುತ್ತದೆ. ಈ ಪಕ್ಷಗಳಿಂದಾಗುವ ಇನ್ನೊಂದು ಲಾಭವೆಂದರೆ, ಬಡವರೂ ಬುದ್ಧಿವಂತರೂ ಸದ್ಗುಣಿಗಳೂ ಸಮರ್ಥರೂ ಆದ ಜನರು ಅಗಾಧ ಹಣ ಖರ್ಚುಮಾಡಿ ಚುನಾವಣೆಯಲ್ಲಿ ಶ್ರೀಮಂತರೊಂದಿಗೆ ಸ್ಪರ್ಧಿಸುವುದು ಅಸಾಧ್ಯವಾದಾಗ, ಪಕ್ಷಗಳು ಅಂಥ ಯೋಗ್ಯರನ್ನು ತನ್ನ ಉಮೇದುವಾರರೆಂದು ಆರಿಸಿ, ಧನ ಜನ ಬೆಂಬಲದಿಂದ ವಿಧಾನಸಭೆ ಸಂಸತ್ತುಗಳಿಗೆ ಆರಿಸಿ ತರಬಹುದು. ಬಂಡವಾಳ ವ್ಯವಸ್ಥೆ ಮತ್ತು ಅಸಮಾನ ಸಂಪತ್ತಿನ ಹಂಚಿಕೆ ಇರುವಾಗಲೂ ಅನೇಕ ದೇಶಗಳಲ್ಲಿ ಶ್ರಮಿಕವರ್ಗದ ಪ್ರತಿನಿಧಿಗಳು ವಿಧಾನಸಭೆಗಳಿಗೆ ಆರಿಸಿ ಬಂದು ಸರ್ಕಾರ ರಚಿಸುವ ಸಾಮಥ್ರ್ಯ ಸಂಪಾದಿಸಿದ್ದು ಇಂಥ ರಾಜಕೀಯ ಪಕ್ಷಗಳ ಉದಯ, ಪ್ರಚಾರ ಹಾಗೂ ಬೆಂಬಲದಿಂದ ಸಾಧ್ಯವಾಗಿದೆ. ಇಂದಿನ ವಿಶಾಲವಾದ ಪ್ರಜಾಸತ್ತಾತ್ಮಕ ದೇಶಗಳಲ್ಲಿ ಚುನಾವಣೆಗಳಲ್ಲಿ ಪ್ರಧಾನವಾದ ಅಂಶವೆಂದರೆ ಮತದಾರರ ಅಜ್ಞಾನ ಹಾಗೂ ಅನಾಸಕ್ತಿ ಎಂಬುದು ಅನೇಕ ಅಧ್ಯಯನಶೀಲರಿಗೆ ಕಂಡುಬಂದಿದೆ. ಅನೇಕ ಬುದ್ಧಿಜೀವಿಗಳಿಗೂ ಚುನಾವಣೆ ಒಂದು ತಮಾಷೆಯಂತೆ ಹಗುರಾಗಿ ಕಾಣುತ್ತದೆ. ಇಂಥ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಚುರುಕಿನ ಪ್ರಚಾರವೇ ಮತದಾರರಲ್ಲಿ ತಮ್ಮ ಹೊಣೆಗಾರಿಕೆಯ ಕಲ್ಪನೆಯನ್ನು ಜಾಗೃತಗೊಳಿಸಿ ಹೆಚ್ಚು ಹೆಚ್ಚು ಭಾಗವಹಿಸುವಂತೆ ಪ್ರೇರೇಪಿಸಿದೆ. ಪಂಚಾಯಿತಿ ಚುನಾವಣೆಗಳಲ್ಲಿ ಮತದಾರರಿಗೆ ಉಮೇದುವಾರನ ನೇರ ಪರಿಚಯವಿರುತ್ತದೆ. ಆದರೆ ವಿಧಾನಸಭೆ ಹಾಗೂ ಲೋಕಸಭೆಗಳ ಚುನಾವಣೆಗಳಲ್ಲಿ ಉಮೇದುವಾರನ ಬಗ್ಗೆ ಯೋಗ್ಯ ಕಲ್ಪನೆಯನ್ನು ಮತದಾರರ ಮನಸ್ಸಿನಲ್ಲಿ ಉಂಟುಮಾಡುವುದು ಎಲ್ಲರ ದೃಷ್ಟಿಯಿಂದಲೂ ಅಗತ್ಯವಾಗುತ್ತದೆ. ಏಕೆಂದರೆ ಮತದಾರರಿಗೆ ಅವರ ಪ್ರತ್ಯಕ್ಷ ಪರಿಚಯವಿರುವುದು ವಿರಳ. ಈ ಕೆಲಸವನ್ನು ಪಕ್ಷಗಳು ಪ್ರಚಾರದ ಮೂಲಕ ಮಾಡುತ್ತವೆ. ಜನಾಭಿಪ್ರಾಯವನ್ನು ರೂಪಿಸುತ್ತವೆ. ವಿರೋಧಪಕ್ಷ, ಆಳುವಪಕ್ಷ-ಇವೆರಡರ ರಚನೆಗೂ ಇದು ಅಗತ್ಯ. ಪ್ರಜಾರಾಜ್ಯದಲ್ಲಿ ಪಕ್ಷಗಳು ಕೇವಲ ಚುನಾವಣೆಗಾಗಿ ಮಾತ್ರ ಇರುವುದಿಲ್ಲ. ಅವು ರಾಜ್ಯ, ರಾಷ್ಟ್ರಗಳಂತೆ ನಿರಂತರ ಉಳಿಯುವುವು. ಏಕೆಂದರೆ ಸಾರ್ವತ್ರಿಕ ಚುನಾವಣೆಗಳ ನಡುವೆ ಅನೇಕ ಕಾರಣಗಳಿಗಾಗಿ ತೆರವಾದ ಸ್ಥಳಗಳಿಗಾಗಿಯೂ ವಿವಿಧ ಹಂತದ ಸಂಸ್ಥೆಗಳಿಗಾಗಿಯೂ ಚುನಾವಣೆ ಉಪಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಚುನಾವಣೆಗಳು ಬೇರೆಬೇರೆಯಾದರೂ ಮತದಾರರು ಅವರೇ ಆದ ಕಾರಣ, ಪರಸ್ಪರ ವಿರುದ್ಧವಾದ ವಿಚಾರಗಳ ನಡುವೆ ಒಂದು ಅಭಿಪ್ರಾಯ ರೂಪಿಸುವ ಹಾಗೂ ಮತದಾರರ ಮೆಚ್ಚಿಕೆ ಕಾಪಾಡಿಕೊಳ್ಳುವ ಕೆಲಸ ನಿರಂತರ ಇದ್ದೇ ಇರುತ್ತದೆ. ಹೀಗೆ ಲೋಕಸತ್ತೆಯ ಚಲನಶೀಲತೆಗೆ ರಾಜಕೀಯ ಪಕ್ಷಗಳು ಒಂದು ಬಗೆಯ ಶಕ್ತಿಮೂಲವಿದ್ದಂತೆ, ಭಾರತದಲ್ಲಿ ಪಕ್ಷರಹಿತ ಪ್ರಜಾಪ್ರಭುತ್ವ ಬೇಕೆನ್ನುವವರೂ ಇದ್ದಾರೆ. ಆದರೆ ಮತದಾರರಿಗೆ ಪ್ರಚಾರದ ಮೂಲಕ ಅಭಿಪ್ರಾಯ ರೂಪಿಸಲು ನೆರವಾಗುವಂಥ ಹಾಗೂ ದುರ್ಬಲ ಉಮೇದುವಾರರಿಗೆ ಧನ, ಜನ ಬೆಂಬಲ ನೀಡುವಂಥ ಪರ್ಯಾಯ ಸಂಸ್ಥೆ ಯಾವುದೆಂಬುದನ್ನು ಅವರು ಹೇಳುವುದಿಲ್ಲ. ಸರ್ಕಾರದ ಶಾಂತಿಯುತ ಬದಲಾವಣೆಗೆ ಪಕ್ಷಗಳಿಂದಾಗುವ ಲಾಭವನ್ನು ಮರೆಯುವಂತಿಲ್ಲ. ಹೀಗೆಂದರೆ ಪಕ್ಷ ವ್ಯವಸ್ಥೆಯಲ್ಲಿ ದೋಷಗಳಿಲ್ಲವೆಂದಲ್ಲ. ಅಲ್ಲಿ ಕಂಡುಬಂದ ದೋಷಗಳೇ ಪಕ್ಷಗಳ ಬಗ್ಗೆ ಸಂಶಯ ಹುಟ್ಟಿಸಲು ಕಾರಣವಾಗಿದೆ.

ಉಮೇದುವಾರರ ನಾಮನಿರ್ದೇಶನ : ಚುನಾವಣೆಯಲ್ಲಿ ಎರಡು ಹಂತಗಳುಂಟು : 1 ಉಮೇದುವಾರನ ನಾಮನಿರ್ದೇಶ ಅಥವಾ ನಾಮಕರಣ, 2 ವಾಸ್ತವ ಮತದಾನ, ನಾಮನಿರ್ದೇಶಿತವಾದ ಉಮೇದುವಾರನ ಪರವಾಗಿ ಮತ ಹಾಕುವ ಅಥವಾ ಹಾಕದಿರುವ ಸ್ವಾತಂತ್ರ್ಯ ಮತದಾರನಿಗಿದೆ. ಎಲ್ಲ ಉಮೇದುವಾರರೂ ಅಯೋಗ್ಯರೆಂದು ಕಂಡರೆ ಮತದಾರ ಬೇರೆಯವರನ್ನು ತರಲಾರ. ಆದಕಾರಣ ನಾಮನಿರ್ದೇಶದ ಹಂತ ಚುನಾವಣೆಯಲ್ಲಿ ಬಹು ಮುಖ್ಯವಾದ್ದು. ದೊಡ್ಡ ಪ್ರಜಾಸತ್ತಾತ್ಮಕ ದೇಶಗಳಲ್ಲೆಲ್ಲ ಪಕ್ಷಗಳೇ ಉಮೇದುವಾರರನ್ನು ಆರಿಸುತ್ತವೆ. ಸ್ವತಂತ್ರವಾಗಿ ಕೆಲವರು ನಿಂತರೂ ಹಾಗೆ ನಿಲ್ಲುವವರಿಗೆ ಧನ ಜನ ಬಲ ಕಡಿಮೆ. ಅಂಥವರು ಆರಿಸಿ ಬರುವುದೂ ಕಡಿಮೆ. ಆದಕಾರಣ ಪಕ್ಷಗಳು ಬುದ್ಧಿವಂತ, ಪ್ರಾಮಾಣಿಕ ಹಾಗೂ ದಕ್ಷರಾದ ಉಮೇದುವಾರರನ್ನು ನಾಮನಿರ್ದೇಶ ಮಾಡಿದರೆ ಒಳ್ಳೆಯ ಸರ್ಕಾರದ ರಚನೆ ಸಾಧ್ಯವಾಗುತ್ತದೆ. ಉಮೇದುವಾರರು ಕೆಟ್ಟವರಿದ್ದರೆ ಸರ್ಕಾರ ಕೆಟ್ಟದಾಗುವುದು ಅನಿವಾರ್ಯ. ರಾಜಕೀಯ ತಜ್ಞರೊಬ್ಬರು ಹೇಳುವಂತೆ, ಪ್ರಜಾರಾಜ್ಯದಲ್ಲಿ ಪಕ್ಷವೆಂಬುದು ರಾಜನೂ ಹೌದು, ರಾಜ ನಿರ್ಮಾಪಕನೂ ಹೌದು. ಎಲ್ಲ ರಾಜಕೀಯ ಪಕ್ಷಗಳಲ್ಲಿ (ಕೆಲವೇ ಅಪವಾದಗಳ ಹೊರತು), ವಿಶೇಷವಾಗಿ ದೊಡ್ಡ ದೊಡ್ಡ ಪಕ್ಷಗಳಲ್ಲಿ, ಮೇಲ್ಮಟ್ಟದ ಕೆಲವೇ ಮುಖಂಡರು ಪಕ್ಷದ ಮೇಲೆ ಹಿಡಿತವಿಟ್ಟುಕೊಳ್ಳುವ ಪ್ರವೃತ್ತಿ ಕಂಡುಬರುತ್ತದೆ. ಇಂಥ ಪಕ್ಷಗಳು ಬಹುಕಾಲದವು. ಬಹುಕಾಲದವರೆಗೆ ಆಳ್ವಿಕೆ ಮಾಡಿದವು ಮತ್ತು ಭವಿಷ್ಯದಲ್ಲೂ ಆಳುವ ಅವಕಾಶ ಪಡೆದು ಮುಂದುವರಿಯುವಂಥವು ಆಗಿದ್ದರಂತೂ ತೀರಿತು. ಒಂದು ಚಿಕ್ಕ ಗುಂಪೇ ಪ್ರಬಲ ಪ್ರಭಾವಿಯಾಗಿರುತ್ತದಲ್ಲದೆ ಅಂಥ ಪ್ರಭಾವವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನೇ ಮಾಡುತ್ತಿರುತ್ತದೆ. ಇಂಥ ಪಕ್ಷದ ಆಂತರಿಕ ವ್ಯವಹಾರದಲ್ಲಿ ಪ್ರಜಾಸತ್ತಾತ್ಮಕ ರೂಢಿಗಳಿಗೆ ಹೆಚ್ಚು ಬೆಲೆ ಇರುವುದಿಲ್ಲ. ಉಮೇದುವಾರರನ್ನು ನಿರ್ಧರಿಸುವುದರಲ್ಲಿ, ಸರ್ಕಾರದ ರಚನೆಯಲ್ಲಿ ಈ ಪ್ರಭಾವಿ ಗುಂಪಿನದೇ ಕೊನೆಯ ನಿರ್ಣಯ. ಅದನ್ನು ಪ್ರತಿಭಟಿಸುವ ಸಾಮಥ್ರ್ಯವಿರುವವರು ಬಹು ವಿರಳ. ಹೀಗಾಗಿ ಒಂದು ಚಿಕ್ಕ ಗುಂಪಿನ ಹತ್ತೋ ಹನ್ನೆರಡೋ ಜನರದೇ ಸರ್ವಾಧಿಕಾರ ಬೆಳೆಯುತ್ತದೆ. ಮತದಾರರು ಯಾರಿಗೆ ಮತ ಹಾಕಬೇಕೆಂಬುದನ್ನು ಸಹ ಈ ಗುಂಪು ನಿರ್ಧರಿಸುತ್ತದೆ. ಯಾರು ದೇಶವನ್ನಾಳಬೇಕು ಎಂಬುದನ್ನು ಕೂಡ ಈ ಗುಂಪಿನವರೇ ಹೇಳುವ ಪರಿಸ್ಥಿತಿ ಬರುತ್ತದೆ. ರಾಷ್ಟ್ರದ ಭವಿಷ್ಯವೇ ಕೆಲವರ ಕೈಯಲ್ಲಿರುತ್ತದೆ. ಇದೊಂದು ವಿಪರ್ಯಸ್ತ ಅವಸ್ಥೆ.

ಇಂಥ ವಿಪರ್ಯಾಸ 19ನೆಯ ಶತಮಾನದಲ್ಲಿ ಅಮೆರಿಕದಲ್ಲಿ ಬಹಳ ಹಾನಿಯನ್ನುಂಟುಮಾಡಿತು. ಉಮೇದುವಾರರ ನಾಮನಿರ್ದೇಶದಲ್ಲಿ ಹಲವು ಬಗೆಯ ದುವ್ರ್ಯವಹಾರಗಳು ನಡೆದುವು. ಕೆಲವೇ ಜನರು ನಾಮನಿರ್ದೇಶದ ಅಧಿಕಾರದ ಬಲದಿಂದ ಪ್ರಜಾಸತ್ತೆಯ ಹೆಸರಿನಲ್ಲಿ ಅಧಿಕಾರ ಮತ್ತು ಲಾಭಕರಸ್ಥಾನಗಳನ್ನು ಸ್ನೇಹಿತರಲ್ಲಿ, ಬಳಗದವರಲ್ಲಿ ಹಂಚಿಕೊಳ್ಳುತ್ತಿದ್ದರು. ಇದನ್ನು ಪ್ರತಿಭಟಿಸಿದ ಜನರು ಪಕ್ಷದ ಆಂತರಿಕ ವ್ಯವಸ್ಥೆಯಲ್ಲೂ ಪ್ರಜಾಸತ್ತಾತ್ಮಕ ರೂಢಿಗಳನ್ನು ತರಲು ಪ್ರಯತ್ನಿಸಿದರು. ನಾಮನಿರ್ದೇಶನದ ಅಧಿಕಾರವನ್ನು ಪ್ರಾಥಮಿಕ ಘಟ್ಟದ ಸಂಸ್ಥೆಗಳ ಸದಸ್ಯರಿಗೆ ಕೊಡಲಾಯಿತು. ಪಕ್ಷಗಳ ವ್ಯವಹಾರ ಖಾಸಗಿಯಾದುದಲ್ಲವೆಂದು, ಅದರ ವ್ಯವಹಾರಗಳನ್ನು ಬಹಿರಂಗಪಡಿಸುವ ವ್ಯವಸ್ಥೆಯಾಯಿತು. ಆದರೆ ಒಳಗೇ ಕೈವಾಡ ಮಾಡುವಂಥ ಪ್ರವೃತ್ತಿಯನ್ನು ಇದು ಎಷ್ಟು ಮಟ್ಟಿಗೆ ತಡೆದಿದೆಯೆಂಬುದು ವಿಚಾರಣೀಯವಾದ ಅಂಶ.
ನಾಮನಿರ್ದೇಶದಲ್ಲಿ ಆದ್ಯ ಗಮನವನ್ನು ಉಮೇದುವಾರನ ಗೆಲ್ಲುವ ಸಾಧ್ಯತೇ ಕೊಡಲಾಗುತ್ತದೆ. ಉಮೇದುವಾರನ ನೈಜವಾದ ಯೋಗ್ಯತೆಯನ್ನರಿತು, ಅವನಿಗೆ ಗೆಲ್ಲುವ ಅವಕಾಶಗಳು ಕಡಿಮೆಯಿದ್ದರೂ ಪ್ರಚಾರಬಲದಿಂದ ಜನಾಭಿಪ್ರಾಯವನ್ನೂ ರೂಪಿಸಿ ಗೆಲ್ಲಿಸುವ ಪ್ರಯತ್ನ ಮಾಡಲು ಪಕ್ಷದಲ್ಲಿ ನೈತಿಕ ಸ್ಥೈರ್ಯ ಇರಬೇಕಾಗುತ್ತದೆ. ಅದಿಲ್ಲದಿದ್ದರೆ, ಕಡಿಮೆ ಯೋಗ್ಯತೆಯ ಉಮೇದುವಾರರಾದರೆ, ಆಯಾ ಕ್ಷೇತ್ರಗಳಲ್ಲಿ ಪ್ರಧಾನವಾಗಿರುವ ಮತದಾರರ ಜಾತಿಯವರ ಅಥವಾ ಅಲ್ಪಸಂಖ್ಯಾತರ ಪ್ರಾತಿನಿಧ್ಯದ ಅಗತ್ಯಕ್ಕನುಗುಣವಾಗಿ ಆ ವರ್ಗಗಳಿಗೆ ಸೇರಿದವರು ಉಮೇದುವಾರರಾಗಿ ಆರಿಸಲ್ಪಡುತ್ತದೆ. ಇದಕ್ಕಿಂತ ಹೆಚ್ಚಾಗಿ, ಪಕ್ಷ ಪ್ರಮುಖರಿಗೆ ಅನುಕೂಲವಾಗಿರುವವರೇ ಹೆಚ್ಚಾಗಿ ನಿರ್ದೇಶಿತರಾಗುತ್ತಾರೆಯೇ ಹೊರತು, ಯೋಗ್ಯರಿದ್ದರೂ ಪ್ರತಿಭಟನೆಯ ಪ್ರವೃತ್ತಿ ಇರುವವರಿಗೆ ಅವಕಾಶ ಸಿಗುವುದಿಲ್ಲ. ಹೀಗಾಗಿ ಅತ್ಯುತ್ತಮರಿಗೆ ಅಧಿಕಾರ ಬರುವ ಬದಲು ಎರಡನೆಯ, ಮೂರನೆಯ ದರ್ಜೆಯವರಿಗೆ ಅವಕಾಶ ದೊರೆಯುತ್ತದೆ. ಜಾತಿಸಮಾಜಗಳ ಭಾವನೆಗಳಿಗಾಗಿ ಮತದಾರರನ್ನು ದೂಷಿಸುವ ಮೊದಲು, ಪಕ್ಷಪ್ರಮುಖರಲ್ಲಿ ಅನೇಕರು ಇಂಥ ರೋಗಗ್ರಸ್ತರಿರುವುದುನ್ನು ಗಮನಿಸಬೇಕು. ನಾಮನಿರ್ದೇಶಕ್ಕಾಗಿ ಅರ್ಜಿ ಕೊಟ್ಟವರೆಲ್ಲರ ಯೋಗ್ಯತೆ, ಶಿಕ್ಷಣ, ಸೇವೆ ಮುಂತಾದ ವಿವರಗಳನ್ನು ಪಕ್ಷಗಳು ಮೊದಲೇ ಪ್ರಕಟಿಸಿ ಜನಾಭಿಪ್ರಾಯ ಸಂಗ್ರಹಿಸುವುದು ಒಂದು ಅಪೇಕ್ಷಣೀಯ ಪ್ರಯತ್ನವೆನಿಸಬಹುದು. ಏಕೆಂದರೆ ಸರಿಯಾದ ಉಮೇದುವಾರರನ್ನು ನಿರ್ಣಯಿಸುವುದು ಪಕ್ಷಗಳು ಮಾಡುವ ಒಂದು ಸಾರ್ವಜನಿಕ ಕರ್ತವ್ಯ. ಇಂಥ ಕರ್ತವ್ಯ ನಿರ್ವಹಿಸುವಲ್ಲಿ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಯೋಗ್ಯ.

ಪಕ್ಷನಿಧಿಗಳು : ರಾಜಕೀಯ ಪಕ್ಷಗಳಲ್ಲಿ ಕೆಲವು ಶ್ರೀಮಂತವಾದವು. ಇನ್ನು ಕೆಲವಕ್ಕೆ ಅಷ್ಟು ಹಣಬಲವಿರುವುದಿಲ್ಲ. ವ್ಯಕ್ತಿಗಳಿಂದಲೂ ಕಾರ್ಖಾನೆ, ವ್ಯಾಪಾರ ಮತ್ತು ಇತರ ಹಿತಾಸಕ್ತಿ ಸಂಸ್ಥೆಗಳಿಂದಲೂ ಹೆಚ್ಚು ಹಣ ಸಂಗ್ರಹಿಸಬಲ್ಲ ಪಕ್ಷ ಸ್ವಾಭಾವಿಕವಾಗಿ ಪ್ರಚಾರದಲ್ಲೂ ಇತರ ಚಟುವಟಿಕೆಗಳಲ್ಲೂ ಹೆಚ್ಚು ಹಣ ವಿನಿಯೋಗಿಸಿ, ಎಲ್ಲ ಸಾಧನಗಳನ್ನೂ ತನ್ನ ಪಕ್ಷದ ಹಾಗೂ ಪಕ್ಷದ ಉಮೇದುವಾರರ ಯಶಸ್ವಿಯಾಗಿ ಸಮರ್ಥವಾಗಿ ಬಳಸಿಕೊಳ್ಳುತ್ತದೆ. ಈ ಅವಕಾಶ ಧನಬಲವಿಲ್ಲದ ಪಕ್ಷಕ್ಕೆ ಹಾಗೂ ಅಂಥ ಪಕ್ಷದ ಉಮೇದುವಾರರಿಗೆ ಲಭಿಸುವುದಿಲ್ಲ. ಹೀಗಾಗಿ ಪ್ರಜಾಪ್ರಭುತ್ವಕ್ಕೆ ಬುನಾದಿಯಂತಿರುವ ಸಮಾನ ಅವಕಾಶ ತತ್ತ್ವಕ್ಕೆ ಧನ ಸೌಲಭ್ಯ ಧಕ್ಕೆಯುಂಟುಮಾಡುತ್ತದೆ. ಇದಲ್ಲದೆ ದೊಡ್ಡ ಮೊತ್ತದಲ್ಲಿ ಹಣವನ್ನು ದೇಣಿಗೆಯಾಗಿ ಕೊಡುವವರು ಸಹ ಪ್ರತಿಫಲಾಪೇಕ್ಷೆಯಿಲ್ಲದೆ ಕೊಡಲಾರರು. ಜಯವಾದ ಅನಂತರ ರಾಯಭಾರಿ ಪದವಿಯೋ ಕಾರ್ಪೋರೇಷನ್ ಅಧ್ಯಕ್ಷತೆಯೋ ಮುಂತಾದ ಸ್ಥಾನಗಳೋ ತಮ್ಮ ಹಿತಾಸಕ್ತಿಗೆ ಅನುಕೂಲವಾದಂಥ ಅಧಿನಿಯಮ ಸೌಲಭ್ಯಗಳೋ ಇಂಥಾ ದಾನಿಗಳಿಗೆ ದೊರೆಯುತ್ತವೆ. ಹೀಗೆ ವಿಶಿಷ್ಟ ಹಿತಾಸಕ್ತ ಗುಂಪು ಹಿತ್ತಲ ಬಾಗಿಲಿನಿಂದ ಸರ್ಕಾರವನ್ನು ನಿಯಂತ್ರಿಸುವ ಸ್ಥಿತಿ ಏರ್ಪಡುತ್ತದೆ.
ಪ್ರಜಾಸತ್ತಾತ್ಮಕ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸಮಾಡಲು ಪಕ್ಷಗಳೂ ಬೇಕು. ಚಟುವಟಿಕೆಗಳೂ ಬೇಕು. ಅದಕ್ಕಾಗಿ ಹಣವೂ ಬೇಕು. ಆದರೆ ವಿವಿಧ ಪಕ್ಷಗಳ ಧನಾನುಕೂಲದ ಅಸಮಾನತೆಯನ್ನು ಕಡಿಮೆಮಾಡಿ ಚುನಾವಣೆ ನ್ಯಾಯ ಸಮ್ಮತವಾಗುವಂತೆ ಮಾಡಲು ಪ್ರಯತ್ನ ನಡೆಸಬೇಕಾದ್ದು ಅಗತ್ಯ. ಪಕ್ಷಗಳು ಶೇಖರಿಸುವ ಧನದ ಮೂಲವನ್ನು ಬಹಿರಂಗಪಡಿಸಬೇಕು. ಅಂದರೆ ಯಾವ ಪಕ್ಷ ಎಂಥ ಹಣದಿಂದ ಪೋಷಿತವಾಗಿದೆಯೆಂಬುದು ಮತದಾರರಿಗೆ ತಿಳಿಯಬೇಕು. ಇಂಥ ಹಣದ ಬಳಕೆಯ ಮೇಲೆ ಹತೋಟಿ, ಲೆಕ್ಕಪತ್ರಗಳ ಪ್ರಕಟಣೆ ಕಡ್ಡಾಯವಾಗಬೇಕು. ದೇಣಿಗೆಗಳ ಮೊತ್ತಕ್ಕೆ ಒಂದು ಗರಿಷ್ಠ ಮಿತಿ ಏರ್ಪಡಬೇಕು. ಇವೆಲ್ಲ ಸ್ವಲ್ಪಮಟ್ಟಿಗೆ ಭಾರತದ ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿ ಬಂದಿವೆಯಾದರೂ ಇವುಗಳ ಪರಿಣಾಮಕತೆ ಇನ್ನೂ ಹೆಚ್ಚಬೇಕಾಗಿದೆ.
ಉಮೇದುವಾರನಾಗುವ ಸ್ವಾತಂತ್ರ್ಯ, ಸಮಾನ ಅವಕಾಶ (ಧನದ ದೃಷ್ಟಿಯಿಂದ), ಪಕ್ಷಗಳು ಉಮೇದುವಾರನಿಗಾಗಿಯೂ ಪಕ್ಷಕ್ಕಾಗಿಯೂ ವೆಚ್ಚ ಮಾಡುವ ಸ್ವಾತಂತ್ರ್ಯ, ಉಮೇದುವಾರರನ್ನು ನಾಮನಿರ್ದೇಶ ಮಾಡುವ ಸ್ವಾತಂತ್ರ್ಯ, ಪಕ್ಷಗಳ ಚಟುವಟಿಕೆಗಳಿಗಾಗಿ ಧನ ಸಂಗ್ರಹಿಸುವ ಸ್ವಾತಂತ್ರ್ಯಗಳೂ ಈಗ ಯೋಗ್ಯ ಪ್ರಮಾಣದಲ್ಲಿ ದೊರೆತಿವೆ. ಆದರೆ ಇಂಥ ಸ್ವಾತಂತ್ರ್ಯವೇ ಕೆಲವು ಸಮಸ್ಯೆಗಳಿಗೆ ಕಾರಣವಾಗಿದೆ. ಅವಕ್ಕೆ ಪರಿಹಾರ ಇನ್ನೂ ಸಿಗಬೇಕಾಗಿದೆ.
ಅಸ್ವತಂತ್ರ, ನ್ಯಾಯಸಮ್ಮತವಲ್ಲದ ಚುನಾವಣೆ

	ಚುನಾವಣೆಯೂ ಒಂದು ಕ್ರೀಡೆ. ಕ್ರಿಡೆಗಳಲ್ಲಿ ಕೆಲವು ಸರ್ವಸಮ್ಮತ ನಿಯಮಗಳನ್ನು ಪಾಲಿಸಬೇಕಾಗುವಂತೆ ಚುನಾವಣೆಯಲ್ಲೂ ಪಾಲಿಸಬೇಕಾಗುತ್ತದೆ. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದರಿಂದ ಹಿಡಿದು ಚುನಾವಣೆಯ ಫಲಿತಾಂಶ ಪ್ರಕಟಣೆ, ಅದರ ವಿವಾದಗಳೆಲ್ಲದರ ಇತ್ಯರ್ಥ-ಇವುಗಳವರೆಗೂ ಮತದಾರ, ಉಮೇದುವಾರ, ಅಧಿಕಾರಿಗಳು, ಪಕ್ಷಗಳು, ಅಧಿಕಾರದಲ್ಲಿ ಇರುವ ಸರ್ಕಾರ-ಎಲ್ಲರೂ ಪಾಲಿಸಬೇಕಾದ ನಿಯಮಗಳಿವೆ. ಇವರಲ್ಲಿ ಯಾರೇ ಅತಿಕ್ರಮಿಸಿದರೂ ಚುನಾವಣೆ ನ್ಯಾಯಸಮ್ಮತವಾಗಿರುವುದಕ್ಕೆ ಭಂಗ ಉಂಟಾಗುತ್ತದೆ. ಲಂಚ, ಬೆದರಿಕೆ, ಅಧಿಕಾರದ ದುರುಪಯೋಗ ಇವು ಚುನಾವಣೆಗೆ ಅನ್ಯಾಯ ಮಾಡುವ ಮೂರು ಪ್ರಧಾನ ದೋಷಗಳು, ಮತದಾರರಿಗೆ, ಉಮೇದುವಾರರಿಗೆ, ಅಧಿಕಾರಿಗಳಿಗೆ, ಸ್ಥಾನಿಕ ಮುಖಂಡರಿಗೆ ಲಂಚ ಕೊಡಬಹುದು, ಕೊಡಿಸಬಹುದು, ಲಂಚದ ಆಸೆ ಹುಟ್ಟಿಸಬಹುದು. ಪಕ್ಷದ ಧನ ಮತ್ತು ಜನಬಲದಿಂದ ಆಳುವ ಸರ್ಕಾರಿ ಶಕ್ತಿಯಿಂದ ಬೆದರಿಕೆ ಹಾಕಬಹುದು. ಆಳುವ ಸರ್ಕಾರದ ಮಂತ್ರಿಗಳು ಚುನಾವಣೆ ಹತ್ತಿರವಿರುವಾಗ ವಿಶಿಷ್ಟ ಕ್ಷೇತ್ರಗಳಲ್ಲಿ ಸರ್ಕಾರಿ ವೆಚ್ಚದ ವಿಶೇಷ ಸೌಲಭ್ಯಗಳನ್ನು ಏರ್ಪಡಿಸಬಹುದು. ಕಾಮಗಾರಿಗಳನ್ನು ಮಾಡಿಸಬಹುದು. ಇವು ಲಂಚ ಅಥವಾ ಅಕ್ರಮವರ್ತನೆಯನ್ನು ವಿರೋಧಿಸುವ ಕಾನೂನಿನ ಪರಿಮಿತಿಯಲ್ಲಿ ಬರದಿದ್ದರೂ, ಅಧಿಕಾರದ ದುರುಪಯೋಗದಿಂದ ಮತದಾರರನ್ನು ಪ್ರಭಾವಿಸುವ ಪ್ರಯತ್ನವಂತೂ ಆಗುತ್ತದೆ. ಜಾತೀಯ ಉಚ್ಚನೀಚ ಭಾವಗಳನ್ನು ಉದ್ರೇಕಿಸುವ ಅಥವಾ ಪೋಷಿಸುವ ಮೂಲಕ ಮತ್ತು ಧರ್ಮಗುರುಗಳನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವ ಮೂಲಕ ಮತದಾರರ ಮೇಲೆ ಒತ್ತಡ ತರಬಹುದು. ಮತದಾರರಿಗೆ ಭೋಜನ, ಮಾದಕ ಪಾನೀಯ, ವಾಹನಸೌಕರ್ಯಗಳ ಏರ್ಪಾಟು ಮುಂತಾದುವುಗಳ ಮೂಲಕ ಅವರ ಅಭಿಪ್ರಾಯವನ್ನು ಕೊಂಡುಕೊಳ್ಳಬಹುದು. ಸಾಹುಕಾರರ ಪ್ರಭಾವವನ್ನು ಸಾಲಗಾರರ ಮೇಲೆ, ಜಮೀನುದಾರರ ಪ್ರಭಾವವನ್ನು ಗೇಣಿದಾರರ ಮೇಲೆ, ಕಾರ್ಖಾನೆ ಮಾಲೀಕರ ಪ್ರಭಾವವನ್ನು ಕೂಲಿಗಾರರ ಮೇಲೆ ಪ್ರಯೋಗಿಸಬಹುದು. ಇಂಥ ದುವ್ರ್ಯವಹಾರಗಳನ್ನು ಅನೇಕ ದೇಶಗಳಲ್ಲಿ-ಭಾರತದಲ್ಲಿ ಸಹ-ಹೆಚ್ಚು ಕಡಿಮೆ ಪ್ರಮಾಣಗಳಲ್ಲಿ ಇರುವುದು ಕಂಡುಬಂದಿದೆ. ಇವೆಲ್ಲವೂ ಚುನಾವಣೆಗಳ ಪಾವಿತ್ರ್ಯವನ್ನು ಹಾಳುಮಾಡುತ್ತವೆ. ಇವುಗಳ ವಿರುದ್ಧ ಪ್ರಬಲವಾದ ಜನಾಭಿಪ್ರಾಯ ನಿರ್ಮಾಣವಾಗಬೇಕಾಗಿದೆ.
ಮತದಾನದ ಕಾಲದಲ್ಲಿ ಅಂಗವಿಕಲರ ಜೊತೆಗೆ ಅವರಿಗೆ ಸಹಾಯಕರಾಗಿ ಬರುವವರು ಅನೇಕ ಸಲ ಮತದಾರರ ಇಚ್ಛೆಯ ವಿರುದ್ಧ ಮತ ಹಾಕಬಹುದು. ಒಬ್ಬನ ಮತವನ್ನು ಮತ್ತೊಬ್ಬ ಬಂದು ಹಾಕಿ ಹೋಗಿಬಿಡಬಹುದು. ಕೆಲವು ಸಲ ಒಂದು ಪಕ್ಷದವರು ತಮ್ಮ ಬೆಂಬಲಿಗರನ್ನೇ ಮೊದಲು ಮತಗಟ್ಟೆಗೆ ತಂದು ನಿಲ್ಲಿಸಿ, ಇತರ ಮತದಾರರು ಮತಕೊಡಲು ಸಮಯ ಸಿಗದಂತೆ ಮಾಡಬಹುದು. ಮತಪೆಟ್ಟಿಗೆಗಳನ್ನು ಸಾಗಿಸುವಾಗ-ವಿವಿಧ ಹಂತಗಳಲ್ಲಿ-ಅವನ್ನು ಬದಲಾಯಿಸಬಹುದು. ಮತಗಣನೆಯಾಗುವಾಗಲೂ ಅಕ್ರಮವಾಗಬಹುದು. ಇವೆಲ್ಲಕ್ಕೂ ಸಂಬಂಧಿಸಿದ ಕಾನೂನುಗಳಿವೆ; ವಿಚಾರಣಾಕ್ರಮವಿದೆ. ಆದರೆ ವಿಚಾರಣೆಯ ವಿಳಂಬದಿಂದ ಚುನಾವಣೆಯ ಅನ್ಯಾಯಗಳಿಗೆ ಬೆಂಬಲ ದೊರಕುತ್ತದೆ. ಕಾನೂನುಗಳಿದ್ದರೂ ಈ ದುವ್ರ್ಯವಹಾರಗಳನ್ನು ಸಂಪೂರ್ಣ ನಿರ್ಮೂಲ ಮಾಡುವುದಾಗಿಲ್ಲ. ಶಾಸನಗಳ ಹಿಡಿತಕ್ಕೆ ಸಿಕ್ಕದ ಎಷ್ಟೋ ಅಕ್ರಮಗಳು ನಡೆಯಬಹುದು. ಈ ದುವ್ರ್ಯವಹಾರಗಳು ಮತ್ತು ಅಕ್ರಮಗಳು ವ್ಯಕ್ತಿಗಳಿಂದ, ಗುಂಪುಗಳಿಂದ ಆದಾಗ ಅವನ್ನು ಹೇಗೋ ತಡೆಯಲು ಪ್ರಯತ್ನಿಸಬಹುದು. ಅದರೆ ಆಳುವ ಸರ್ಕಾರದಿಂದಲೇ ಅಕ್ರಮವಾಗುವುದಾದರೆ ಅದನ್ನು ತಡೆಯುವುದು ಕಷ್ಟಸಾಧ್ಯ. ಆಳುವ ಪಕ್ಷ ಸ್ವಾಭಾವಿಕವಾಗಿ ತಾನು ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿರುತ್ತದೆ. ಆದ್ದರಿಂದ ಚುನಾವಣೆಯ ಕಾರ್ಯನಿರ್ವಹಣೆಯೆಲ್ಲ ಸರ್ಕಾರದ ನಿಯಂತ್ರಣದಲ್ಲಿ ಇರುವುದು ಅಪಾಯಕರವೆಂದು ಭಾವಿಸಲಾಗಿದೆ.

ಭಾರತದ ಚುನಾವಣಾ ಆಯೋಗ : ಚುನಾವಣೆ ಹಾಗೂ ಅದರ ಅಂಗಸಂಸ್ಥೆಗಳು ಆಳುವ ಸರ್ಕಾರದ ಹತೋಟಿಯಲ್ಲಿ ಇರಕೂಡದೆಂಬ ವಿಚಾರವನ್ನು ಅನುಸರಿಸಿಯೇ ಭಾರತದ ಸಂವಿಧಾನದಲ್ಲಿ ಪ್ರತ್ಯೇಕ ಚುನಾವಣಾ ಆಯೋಗದ ನೇಮಕಕ್ಕೆ ಅವಕಾಶ ಮಾಡಿಕೊಡಲಾಗಿದೆ. ಚುನಾವಣೆಗಳ ಮೇಲ್ವಿಚಾರಣೆ ನಿರ್ದೇಶನ ಹಾಗೂ ನಿಯಂತ್ರಣವೆಲ್ಲ ಈ ಆಯೋಗದ ಅಧಿಕಾರದಲ್ಲಿದೆ. ರಾಷ್ಟ್ರಾಧ್ಯಕ್ಷರೇ ನೇಮಿಸುವ ಈ ಆಯೋಗದಲ್ಲಿ ಮುಖ್ಯ ಚುನಾವಣಾ ಕಮಿಷನರೂ ಸದಸ್ಯ ಕಮಿಷನರೂ ಇರುತ್ತಾರೆ. ಪ್ರಾದೇಶಿಕ ಚುನಾವಣಾ ಕಮಿಷನರುಗಳನ್ನೂ ಹೀಗೇ ನೇಮಿಸಲಾಗುತ್ತದೆ. ಸಂವಿಧಾನದ ನಿಯಮಗಳ ಪ್ರಕಾರ ಮುಖ್ಯ ಚುನಾವಣಾ ಕಮಿಷನರನ ನೇಮಕವನ್ನು ಪರಮೋಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನು ವಜಾ ಮಾಡುವ ರೀತಿಯಲ್ಲಿ ಮಾತ್ರ ವಜಾ ಮಾಡಲು ಶಕ್ಯವಿದೆ. ಹೀಗೆ ಕಾರ್ಯಾಂಗದಿಂದ ಈ ಆಯೋಗ ಸಂಪೂರ್ಣ ಸ್ವತಂತ್ರವಾಗಿರಲು ಅವಕಾಶ ಒದಗಿಸಲಾಗಿದೆ. ಭಾರತ ಒಕ್ಕೂಟಕ್ಕೆ ಸಂಬಂಧಿಸಿದ ರಾಷ್ಟ್ರಪತಿಗಳೂ ರಾಜ್ಯಗಳಲ್ಲಿ ರಾಜ್ಯಪಾಲರೂ ಈ ಆಯೋಗಕ್ಕೆ, ಇದರ ಅಂಗಸಂಸ್ಥೆಗಳಿಗೆ ಸಿಬ್ಬಂದಿ ಒದಗಿಸುವ ಹೊಣೆ ಹೊತ್ತಿದ್ದಾರೆ.

ಇಷ್ಟೆಲ್ಲ ಇದ್ದರೂ ಚುನಾವಣಾ ಆಯೋಗ ಹಾಗೂ ಸಿಬ್ಬಂದಿ ಸರ್ಕಾರದ ಹಿಡಿತದಿಂದ, ಪ್ರಭಾವದಿಂದ ಮುಕ್ತವಾಗಿದೆಯೆ? - ಎಂದು ಪ್ರಶ್ನಿಸಲಾಗುತ್ತಿದೆ. ಏಕೆಂದರೆ ಚುನಾವಣಾ ಆಯೋಗಕ್ಕೆ ಪ್ರತ್ಯೇಕವಾದ ಸಿಬ್ಬಂದಿಯಿಲ್ಲ. ಪ್ರತ್ಯೇಕ ಸಿಬ್ಬಂದಿ ವ್ಯವಸ್ಥೆ ಅಸಾಧಾರಣ ವೆಚ್ಚದ್ದಾಗುವುದೇನೋ ನಿಜ. ಮತದಾರರ ಪಟ್ಟಿ ಮತ್ತು ಮತಕ್ಷೇತ್ರಗಳನ್ನು ತಯಾರಿಸುವವರು, ಚುನಾವಣೆ ನಡೆಸುವವರು-ಇವರೆಲ್ಲ ಸದ್ಯಕ್ಕಂತೂ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮಮಟ್ಟಗಳ ರೆವೆನ್ಯೂ ಇಲಾಖೆಯ ಮತ್ತು ಇತರ ಇಲಾಖೆಗಳ ಅಧಿಕಾರಿಗಳು. ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು ಸಹ ಆಡಳಿತಸೇವೆಗೆ ಸಂಬಂಧಿಸಿದವರು. ಇವರೆಲ್ಲ ಅಂತಿಮವಾಗಿ ರಾಜ್ಯ ಸರ್ಕಾರಗಳ ಮಂತ್ರಿಗಳಿಗೆ ವಿಧೇಯರೆಂಬುದನ್ನು ಮರೆಯಲಾಗುವುದಿಲ್ಲ. ಈ ಸ್ಥಿತಿಯಲ್ಲಿ ಚುನಾವಣೆಗಳನ್ನು ತತ್ಕಾಲೀನ ಸರ್ಕಾರದ ಹತೋಟಿಯಿಂದ ಬೇರ್ಪಡಿಸುವುದು ದುಸ್ಸಾಧ್ಯವಾಗಬಹುದು. ಮಂತ್ರಿಗಳು ಅಧಿಕಾರಿಗಳ ಮೇಲೆ ಪ್ರಭಾವ ಬೀರದಿರುವ, ಚುನಾವಣಾ ಅಧಿಕಾರಿಗಳು ಅಂಥ ಪ್ರಭಾವವನ್ನು ವಿರೋಧಿಸುವ, ಅದರಿಂದ ದೂರವಿರುವ ಆರೋಗ್ಯಕರ ಸಂಪ್ರದಾಯ ಬೆಳೆದರೆ ಮಾತ್ರ ಈ ವಿಚಾರದಲ್ಲಿ ಒಳ್ಳೆಯ ಫಲಿತಾಂಶವನ್ನು ನಿರೀಕ್ಷಿಸಬಹುದು.

ಚುನಾವಣಾ ಆಯೋಗಕ್ಕೆ ಪ್ರತ್ಯೇಕವಾದ ಸಿಬ್ಬಂದಿಯಿದ್ದು, ಅದು ಸ್ವತಂತ್ರವಾಗಿದ್ದರೂ ತತ್ಕಾಲೀನ ಸರ್ಕಾರ ಪರೋಕ್ಷವಾಗಿ ಚುನಾವಣೆಯನ್ನು ನಿಯಂತ್ರಿಸುವುದು ಶಕ್ಯವಿದೆ. ಪ್ರಜಾಪ್ರಭುತ್ವಕ್ಕೆ ವಾಕ್‍ಸ್ವಾತಂತ್ರ್ಯ, ಪತ್ರಿಕಾಸ್ವಾತಂತ್ರ್ಯ, ಸಂಘ ಸ್ವಾತಂತ್ರ್ಯ. ಚಲವಲನ ಸ್ವಾತಂತ್ರ್ಯ, ಸಭೆ ಸಮ್ಮೇಳನ ಸ್ವಾತಂತ್ರ್ಯ ಇವೆಲ್ಲ ಅಗತ್ಯ. ಇವೆಲ್ಲಕ್ಕೂ ಸಂವಿಧಾನದಲ್ಲಿ ಪ್ರಾಶಸ್ತ್ಯ ಕೊಡಲಾಗಿದೆ. ಇವಕ್ಕೆ ಸರ್ಕಾರ ಸಮಯಾನುಸಾರ ತಡೆಯುಂಟುಮಾಡಿದರೆ ಪರಿಹಾರಕ್ಕಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ದೂರೊಯ್ಯಬಹುದು. ಜನರೂ ಪಕ್ಷಗಳೂ ಇಂಥ ಸ್ವಾತಂತ್ರ್ಯಗಳ ದುರುಪಯೋಗವನ್ನು ಹೇಗೆ ಮಾಡಿಕೊಳ್ಳಬಹುದೋ ಹಾಗೆ ಸರ್ಕಾರವೂ ತನ್ನಲ್ಲಿರುವ ಅಸಾಧಾರಣ ಅಧಿಕಾರಗಳನ್ನು ದುರುಪಯೋಗಿಸಿಕೊಳ್ಳಬಹುದು. ಎಲ್ಲ ಪ್ರಜಾಪ್ರಭುತ್ವಗಳೂ ಎದುರಿಸಬೇಕಾಗಿರುವ ದೊಡ್ಡ ದ್ವಂದ್ವ ಇದು.

ಮತದಾರನ ಕರ್ತವ್ಯ : ಚುನಾವಣೆಯಲ್ಲಿ ಮತದಾನ ಅತ್ಯಂತ ಮಹತ್ತ್ವದ ಹಾಗೂ ಅಂತಿಮ ಘಟ್ಟ. ಮತದಾರ ಪಟ್ಟಿ ತಯಾರಿಕೆ, ಕ್ಷೇತ್ರ ನಿರ್ಧಾರ, ಉಮೇದುವಾರನ ನಾಮಕರಣ, ಆತನ ನಾಮನಿರ್ದೇಶ ಪತ್ರದ ಪರಿಶೀಲನೆ, ಮತದಾನದ ವ್ಯವಸ್ಥೆ ಪಕ್ಷಗಳಿಂದ ತಮ್ಮ ನೀತಿ ಮತ್ತು ಕಾರ್ಯಕ್ರಮಗಳ ಘೋಷಣೆ, ಉಮೇದುವಾರರ ಬಗ್ಗೆ ಪ್ರಚಾರ, ಇದೆಲ್ಲ ನಡೆಯುವುದು ಮತದಾನ ಅನುಕೂಲಕರವಾಗಿಯೂ ಅರ್ಥಪೂರ್ಣವಾಗಿಯೂ ಆಗಬೇಕೆಂದೇ. ನಾಗರಿಕನ ಮತ ಅಮೂಲ್ಯವಾದ್ದು; ಅದರ ಮಹತ್ತ್ವವನ್ನರಿತು ಆತ ತನ್ನ ಹಕ್ಕನ್ನು ಚಲಾಯಿಸುತ್ತಾನೆ ಎಂಬ ನಂಬಿಕೆಯಿಂದಲೇ ಇದೆಲ್ಲ ಜರುಗುತ್ತದೆ.
ಭಾರತದಲ್ಲಿ ಇದುವರೆಗೆ ನಡೆದ ಚುನಾವಣೆಗಳಲ್ಲಿ ಮತದಾರರಲ್ಲಿ ಬಹಳ ಜನ ತಮ್ಮ ಮತಗಳನ್ನು ಚಲಾಯಿಸದಿರುವುದು ಕಂಡುಬಂದಿದೆ. ಇತರ ದೇಶಗಳಲ್ಲಿ ಕೂಡ ಹಲವಾರು ಮತ ನೀಡದಿರುವುದು ಅಧ್ಯಯನದಿಂದ ತಿಳಿದುಬಂದಿದೆ. ಹೆಂಗಸರಿಗಿಂತ ಗಂಡಸರು, ಕಡಿಮೆ ಓದಿದವರಿಗಿಂತಲೂ ಹೆಚ್ಚು ವಿದ್ಯಾವಂತರು, ಗ್ರಾಮೀಣ ಜನತೆಗಿಂತ ನಗರವಾಸಿಗಳು, 33-35ರ ನಡುವಣ ವರ್ಷ ವಯಸ್ಸುಗಳವರು, ಕಿರಿಯರಿಗಿಂತ ಹಿರಿಯರು, ಅವಿವಾಹಿತರಿಗಿಂತ ವಿವಾಹಿತರು, ಬಿಡಿಜನರಿಗಿಂತ ಹೆಚ್ಚಾಗಿ ಸಂಸ್ಥೆಗಳ ಸದಸ್ಯರು ಮತದಾನಗಳಲ್ಲಿ ಭಾಗವಹಿಸುವುದು ಅಮೆರಿಕ, ಆಸ್ಟ್ರೇಲಿಯ ಮತ್ತು ಐರೋಪ್ಯ ದೇಶಗಳಲ್ಲಿ ಕಂಡುಬಂದಿದೆ.

ಭಾರತದಲ್ಲಿ ಮತದಾನದಲ್ಲಿ ಭಾಗವಹಿಸದೆ ಇರುವವರ ಅಧಿಕ ಸಂಖ್ಯೆ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ. ಮತದಾರರಲ್ಲಿ ಅನೇಕರಿಗೆ ಮತದಾನದಲ್ಲಿ ಆಸಕ್ತಿಯಿಲ್ಲವೆಂಬುದು ಇದರಿಂದ ವ್ಯಕ್ತವಾಗುತ್ತದೆ. ಇದರ ಪರಿಣಾಮವಾಗಿ ಅಲ್ಪಸಂಖ್ಯಾತ ಮತಗಳಿಸಿದ ಪಕ್ಷಗಳು ಸರ್ಕಾರ ರಚಿಸುವಂಥ, ಪ್ರಜಾಪ್ರಭುತ್ವ ತತ್ತ್ವಕ್ಕೆ ಸಲ್ಲದ ಪರಿಸ್ಥಿತಿ ಬರಬಹುದು. ಸಮಾಜದ ಎಷ್ಟೋ ಅಂಗಗಳಿಗೆ ಪ್ರಾತಿನಿಧ್ಯ ಸಿಗದೆ ಹೋಗುತ್ತದೆ.

ಮತದಾರರ ಅನಾಸಕ್ತಿಯೂ ಒಂದು ಬಗೆಯ ಪ್ರತಿಭಟನೆ; ಸರ್ಕಾರದ ನೀತಿಯ ಬಗ್ಗೆ ಜನ ತೋರಿಸುವ ಅಸಮ್ಮತಿ; ಪಕ್ಷಗಳು ನಿಲ್ಲಿಸಿದ ಉಮೇದುವಾರರಲ್ಲಿ ತಮಗೆ ನಂಬಿಕೆಯಿಲ್ಲವೆಂದು ಜನ ಘೋಷಿಸಿದ ಹಾಗೆ, ಮಹಾತ್ಮ ಗಾಂಧಿಯವರು ಸಹ 1920ರ ಚುನಾವಣೆಗಳನ್ನು ಬಹಿಷ್ಕರಿಸಲಿಲ್ಲವೆ?-ಎಂದು ವಾದಿಸುವವರೂ ಇದ್ದಾರೆ. ಆದರೆ ಆಗ ಪ್ರಜಾಪ್ರಭುತ್ವ ಇರಲಿಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವ ಸ್ಥಿರವಾಗಬೇಕಾಗಿದೆ. ಸರ್ಕಾರದ ನೀತಿಯ ಮೇಲೆ ಹತೋಟಿ ಸಂಪಾದಿಸಲು ಬೇರೆ ಉಪಾಯಗಳಿರಬಹುದಾದರೂ ಮತದಾನ ಅತ್ಯಂತ ಮಹತ್ತ್ವದ ವಿಧಾನ. ಸಂತಾನಂ ಸಮಿತಿಯವರು ಕಡ್ಡಾಯ ಮತದಾನವನ್ನು ವಿಧಿಸುವ ಸೂಚನೆ ಮಾಡಿದರು. ಈ ಸೂಚನೆಗೆ ಬಹಳ ವಿರೋಧವಿದೆಯಾದರೂ ಭಾರತದಂಥ ದೇಶದಲ್ಲಿ ಇರುವ ವಿಶಿಷ್ಟ ಸನ್ನಿವೇಶಗಳ ದೃಷ್ಟಿಯಿಂದ ಇದನ್ನು ಪರಿಶೀಲಿಸಬೇಕಾಗಿದೆ. ಪ್ರಜಾಪ್ರಭುತ್ವ ಪದ್ಧತಿಯನ್ನು ಒಪ್ಪಿಕೊಂಡ ನಾಗರಿಕನ ಮೇಲೆ ಇರುವ ಮುಖ್ಯ ಕರ್ತವ್ಯಗಳು ಮೂರು; ಮತದಾನ ಮಾಡುವುದು, ಪ್ರಾಮಾಣಿಕವಾಗಿ ಮತದಾನ ಮಾಡುವುದು ಮತ್ತು ಜಾಣತನದಿಂದ ಮತದಾನ ಮಾಡುವುದು. ಈ ಕರ್ತವ್ಯಗಳ ನಿರ್ವಹಣೆ ಆಗದಾಗ ಚುನಾವಣೆ ಸ್ವತಂತ್ರ ಹಾಗೂ ನ್ಯಾಯ ಎನಿಸಲಾರದು.
(ಜೆ.ಆರ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ